ಕೊಪ್ಪಳ, ಸೆ.05(DaijiworldNews/HR): ಆತ 15 ವರ್ಷದ ಬಾಲಕ. ಪಾಠದಲ್ಲೂ ಆಟದಲ್ಲೂ ಮುಂದು. ಆದರೆ ತಂದೆ ಆಟ ಕಡಿಮೆ ಮಾಡಿ ಪಾಠದ ಕಡೆಗೆ ಗಮನ ಕೊಡು ಎಂದಿದಕ್ಕೆ ಮನೇ ಬಿಟ್ಟೇ ಹೋಗಿದ್ದ. ಮಗನ ನಾಪತ್ತೆಯಿಂದ ಹೆತ್ತವರು ಪೊಲೀಸ್ ಸ್ಟೇಷನ್ನಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರು. ಇದೀಗ ಎರಡು ವರ್ಷಗಳ ನಂತರ ನಾಪತ್ತೆಯಾಗಿದ್ದ ಮಗನನ್ನು ಪೊಲೀಸರು ಮತ್ತೇ ಹೆತ್ತವರ ಮಡಿಲಿಗೆ ಹಾಕಿದ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಎರಡು ವರ್ಷಗಳ ಹಿಂದೆ ಮಹಮ್ಮದ್ ಫಯಾಜ್ ಎಂಬ ಹುಡುಗ 9ನೇ ತರಗತಿ ಓದುತ್ತಿದ್ದ ಪ್ರತಿಭಾವಂತ ವಿದ್ಯಾರ್ಥಿ. ಮಗನ ಮೇಲೆ ಅಪಾರ ಭರವಸೆ ಹೊಂದಿದ್ದ ತಂದೆ ಬಾಬಾ ಷರೀಫ್ ಅವರು ಮಗನನ್ನು ಜಾಸ್ತಿ ಕ್ರಿಕೆಟ್ ಗ್ರೌಂಡ್ ನಲ್ಲಿ ನೋಡಿದ್ದಕ್ಕೆ ಆಟ ಕಡಿಮೆ ಮಾಡಿ, ಪಾಠದ ಕಡೆ ಗಮನ ಕೊಡು ಎಂದು ಬುದ್ಧಿ ಮಾತು ಹೇಳಿದ್ದಕ್ಕೆ ಬೇಸರಗೊಂಡ ಮಹಮ್ಮದ್ ಫಯಾಜ್ ಮನೆ ಬಿಟ್ಟು ಬೆಂಗಳೂರಿಗೆ ಹೋಗಿದ್ದ.
ಫಯಾಜ್ ನಾಪತ್ತೆಯಾಗಿರುವುದರಿಂದ ಹೆತ್ತವರು ಕೊಪ್ಪಳ ನಗರ ಪೊಲೀಸ್ ಠಾಣೆಯಲ್ಲಿ 2018ರಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟು ಮಗನಿಗಾಗಿ ಕಾಯುತ್ತಲೇ ಇದ್ದರು. ಖಾಸಗಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆ ಬಾಬಾ ಷರೀಫ್ ಆಗಾಗ ಠಾಣೆಗೆ ಹೋಗಿ ಮಗನ ಬಗ್ಗೆ ಪೊಲೀಸರನ್ನು ವಿಚಾರಿಸುತ್ತಲೇ ಇದ್ದರು.
ಮೊದಲಿಗೆ ಮಿಸ್ಸಿಂಗ್ ಕಂಪ್ಲೇಂಟ್ ಪಡೆದ ಪೊಲೀಸರು, ಹಣ ಇರೋವರೆಗೂ ಸುತ್ತಾಡ್ತಾನೆ. ಆಮೇಲೆ ಅವನೇ ಮನೆಗೆ ಬರ್ತಾನೆ ಎಂದಿದ್ದರು. ನಾವೂ ಸಹ ಆತನನ್ನು ಪತ್ತೆ ಮಾಡ್ತಿವಿ ಎಂದು ಭರವಸೆ ನೀಡಿ ಸುಮ್ಮನಾಗಿದ್ದರು. ಆದರೆ ಮಹಮ್ಮದ್ ಫಯಾಜ್ ಎರಡು ವರ್ಷಗಳಾದರೂ ಪತ್ತೆಯಾಗದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹುಡುಕಾಟ ಕೆಲಸ ಶುರು ಮಾಡಿದಾಗ ಬೆಂಗಳೂರಿನಲ್ಲಿ ಫಯಾಜ್ ಇರುವುದನ್ನು ಪತ್ತೆ ಹಚ್ಚಿ, ಕರೆದುಕೊಂಡು ಬಂದು ಹೆತ್ತವರ ಮಡಿಲಿಗೆ ಹಾಕಿ ಪ್ರಶಂಸೆಗೆ ಪಾತ್ರವಾಗಿದ್ದಾರೆ.
ಫಯಾಜ್ ಬೆಂಗಳೂರಿನಲ್ಲಿ ಕೆಲಸ ಕೇಳಿಕೊಂಡು ಮಂಡ್ಯದ ಗೌಡ್ರ ಬಳಿ ಹೋಗಿದ್ದಾನೆ. ಹುಡುಗನನ್ನು ವಿಚಾರಿಸಿದ ಗೌಡ್ರು, ಆ ಕ್ಷಣದಲ್ಲಿ ಬೇಸರದಲ್ಲಿದ್ದ ಫಯಾಜ್ ಅನಾಥ ಎಂದಿದ್ದಕ್ಕೆ ಮರುಗಿ ಹುಡುಗನ ಜಾಣತನ ಕಂಡು ಮಗನಿಗಿಂತ ಹೆಚ್ಚಾಗಿ ನೋಡಿಕೊಂಡಿದ್ದಾರೆ. ಎರಡು ವರ್ಷಗಳ ಕಾಲ ಗೌಡ್ರ ಕೆಲಸವನ್ನು ನೋಡಿಕೊಂಡಿದ್ದ ಫಯಾಜ್. ಇದೀಗ ಪೊಲೀಸರು ಬೆಂಗಳೂರಿಗೆ ತೆರಳಿ ಫಯಾಜ್ ನನ್ನು ಕೊಪ್ಪಳಕ್ಕೆ ಕರೆ ತರುವಾಗ ವಿಷಯ ಅರಿತ ಮಂಡ್ಯದ ಗೌಡ್ರು, ಫಯಾಜ್ ಗೆ ಹೆತ್ತವರ ಜೊತೆಗಿರಬೇಕು ಎಂದು ಸಲಹೆ ನೀಡಿ ಅವರೂ ಕೂಡ ಕೊಪ್ಪಳಕ್ಕೆ ಬಂದು ಫಯಾಜ್ ನ ಹೆತ್ತವರನ್ನು ಭೇಟಿಮಾಡಿ ಮಾತನಾಡಿದ್ದಾರೆ.