ನವದೆಹಲಿ, ಸೆ.05(DaijiworldNews/HR): ವಿಶ್ವದ ಪ್ರಥಮ ಕೊರೊನಾ ಲಸಿಕೆ ಎನಿಸಿಕೊಂಡಿರುವ ರಷ್ಯಾದ ಸ್ಪುಟ್ನಿಕ್ 5 ಲಸಿಕೆ ಪರಿಣಾಮಕಾರಿ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಕೋವಿಡ್ ವಿರುದ್ಧ ರಷ್ಯಾ ಅಭಿವೃದ್ಧಿಪಡಿಸಿರುವ ಸ್ಪುಟ್ನಿಕ್ 5 ಲಸಿಕೆಯು ಸುರಕ್ಷಿತ ಮತ್ತು ವೈರಾಣು ವಿರುದ್ಧ ಪ್ರತಿರೋಧ ಶಕ್ತಿಯನ್ನು ಉಂಟು ಮಾಡುತ್ತದೆ. 76 ಮಂದಿ ಮೇಲೆ ಆರಂಭಿಕ ಪ್ರಯೋಗ ನಡೆಸಲಾಗಿದ್ದು, 42 ದಿನಗಳಲ್ಲಿ ಇವರಲ್ಲಿ ಯಾವುದೇ ಅಡ್ಡಪರಿಣಾಮಗಳು ಕಂಡುಬಂದಿಲ್ಲ. ಅದಲ್ಲದೆ, ಪ್ರಯೋಗಕ್ಕೆ ಒಳಗಾದ ಪ್ರತಿಯೊಬ್ಬರಲ್ಲೂ 21 ದಿನಗಳ ಒಳಗಾಗಿ ಪ್ರತಿರೋಧ ಶಕ್ತಿ ಹೆಚ್ಚಾಗಿದೆ. ಈ ಲಸಿಕೆಯು ಕೊರೊನಾ ಸೋಂಕಿನಿಂದ ರಕ್ಷಣೆ ನೀಡುತ್ತದೆ ಎಂದಿದ್ದಾರೆ.
ಇನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ತಮ್ಮ ಮಗಳಿಗೆ ಲಸಿಕೆ ನೀಡಲಾಗಿದೆ. ಅದು ಪರಿಣಾಮಕಾರಿಯಾಗಿದೆ ಎಂದು ಹೇಳಿದ್ದಾರೆ.
ವೆಲ್ಕಮ್ ಟ್ರಸ್ಟ್ನ ಬಯೋಟೆಕ್ನಾಲಜಿ ವಿಭಾಗದ ಹಿರಿಯ ಸೋಂಕು ಶಾಸ್ತ್ರಜ್ಞ ಶಾಹಿದ್, ಎರಡನೇ ಹಂತದಲ್ಲಿ 40 ಸ್ವಯಂ ಸೇವಕರು ಮಾತ್ರ ಭಾಗಿಯಾಗಿದ್ದಾರೆ. ಈ ಸಂಖ್ಯೆ ಬಹಳ ಚಿಕ್ಕದು, ಇದನ್ನು ಬಿಟ್ಟರೆ, ಲಸಿಕೆಯು ಸಾಕಷ್ಟು ಪರಿಣಾಮಕಾರಿ ಅನಿಸುತ್ತದೆ ಎಂದು ತಿಳಿಸಿದ್ದಾರೆ.