ಬೆಂಗಳೂರು, ಸೆ. 05 (DaijiworldNews/MB) : ಪಾರ್ಕ್ವೊಂದರಲ್ಲಿ ಸ್ನೇಹಿತರೊಂದಿಗೆ ವರ್ಕೌಟ್ ಮಾಡುತ್ತಿದ್ದ ನಟಿ ಸಂಯುಕ್ತಾ ಹೆಗಡೆ ಹಾಗೂ ಅವರ ಸ್ನೇಹಿತರ ಮೇಲೆ ಹಲ್ಲೆ ಮತ್ತು ಅಸಭ್ಯ ವರ್ತನೆಯ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರು ನಮ್ಮ ಸಮಾಜದಲ್ಲಿ ಅಂತಹ ನೈತಿಕ ಪೊಲೀಸ್ಗಿರಿಗೆ ಸ್ಥಾನವಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಂಯುಕ್ತಾ ಹೆಗಡೆ ಅವರೊಂದಿಗೆ ಏನು ನಡೆದಿದೆ ಅದು ದುರದೃಷ್ಟಕರ. ನಮ್ಮ ಸಮಾಜದಲ್ಲಿ ಅಂತಹ ನೈತಿಕ ಪೊಲೀಸ್ಗಿರಿಗೆ ಸ್ಥಾನವಿಲ್ಲ ಎಂದು ಹೇಳಿರುವುದು ಮಾತ್ರವಲ್ಲದೇ ನಟಿ ಮತ್ತು ಆಕೆಯ ಸ್ನೇಹಿತರ ಮೇಲೆ ಹಲ್ಲೆ ಮಾಡಿ ನಿಂದಿಸಿದ ಕವಿತಾ ರೆಡ್ಡಿ ವಿರುದ್ಧ ಪ್ರಕರಣ ದಾಖಲಿಸಬೇಕು ಹಾಗೂ ಶಿಕ್ಷಿಸಬೇಕು ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಈ ಘಟನೆಯ ಆರೋಪವನ್ನು ಕಾಂಗ್ರೆಸ್ ನಾಯಕರ ಮೇಲೆ ಹೊರಿಸಿರುವ ಬಿಜೆಪಿ ನಾಯಕಿ ಶೋಭಾ ಅವರು, ಕಾಂಗ್ರೆಸ್ ನಾಯಕರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಕೂಡಾ ಹೇಳಿದ್ದಾರೆ.
ಕಿರಿಕ್ ಪಾರ್ಟಿ ಬೆಡಗಿ ಸಂಯುಕ್ತಾ ಹೆಗ್ಡೆ ತನ್ನ ಸ್ನೇಹಿತರೊಂದಿಗೆ ಅಗರ ಉದ್ಯಾನವನದಲ್ಲಿ ಹುಲಾ ಹೂಪ್ ಪ್ರ್ಯಾಕ್ಟೀಸ್ ಮಾಡುತ್ತಿದ್ದ ಸಂದರ್ಭದಲ್ಲಿ ಸ್ಪೋರ್ಟ್ಸ್ ಬಟ್ಟೆ ಧರಿಸಿದ್ದರು. ಈ ವೇಳೆ ಕೆಲ ಮಂದಿ ಸಂಯುಕ್ತಾ ಅಸಭ್ಯವಾಗಿ ಬಟ್ಟೆ ತೊಟ್ಟು ಅಸಭ್ಯವಾಗಿ ವರ್ತನೆ ಮಾಡುತ್ತಿದ್ದಾರೆ ಎಂದು ಸಂಯುಕ್ತಾ ವಿರುದ್ದ ಕಿಡಿಕಾರಿದ್ದು ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ದಂಧೆ ನಡೆಯುತ್ತಿದೆ. ಹಾಗಾಗಿ ನೀವು ಪಾರ್ಕ್ನಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದೀರಿ ಎಂದು ಕೂಡಾ ಆರೋಪಿಸಿದ್ದಾರೆ. ಹಾಗೆಯೇ ಕವಿತಾ ರೆಡ್ಡಿ ಎಂಬ ಮಹಿಳೆ ಹಲ್ಲೆಗೆ ಯತ್ನ ಕೂಡಾ ನಡೆಸಿದ್ದರು. ಇವೆಲ್ಲದರ ವಿಡಿಯೋವನ್ನು ನಟಿ ಸಂಯುಕ್ತಾ ಹೆಗಡೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಹಾಗೆಯೇ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಅಷ್ಟೇ ಅಲ್ಲದೇ ಅಲ್ಲಿಯೇ ಇದ್ದ ವೈದ್ಯರೊಬ್ಬರು ನಾನು ಇಲ್ಲೇ ಇದ್ದೆ. ಈ ಹುಡುಗಿಯರು ಅವರಷ್ಟಕ್ಕೆ ವ್ಯಾಯಾಮ ಮಾಡುತ್ತಿದ್ದರು. ಯಾವುದೇ ಅಸಭ್ಯ ವರ್ತನೆ ಮಾಡಿಲ್ಲ. ಆದರೆ ಈ ಮಂದಿ ಯಾಕೆ ಹೀಗೆಲ್ಲಾ ಆರೋಪ ಮಾಡುತ್ತಾರೆ ಎಂದು ಹೇಳಿರುವುದು ಕೂಡಾ ವಿಡಿಯೋದಲ್ಲಿ ಕಂಡು ಬಂದಿದೆ.