ಬೆಂಗಳೂರು, ಸೆ.05(DaijiworldNews/HR): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರ ವಿರುದ್ಧ ಆರೋಪ ಮಾಡಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷಣ್ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿರುವುದಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ವಿಜಯೇಂದ್ರ ಅವರು ಮುಖ್ಯಮಂತ್ರಿ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಇವರು ಮಾಡುತ್ತಿರುವ ಹಗರಣಗಳನ್ನು ಬಿಜೆಪಿ ಪಕ್ಷದ ನಾಯಕರೇ ಬಹಿರಂಗಪಡಿಸುತ್ತಿದ್ದಾರೆ ಅವರ ವಿರುದ್ಧವೂ ಎಫ್ಐಆರ್ ದಾಖಲು ಮಾಡಿಸುವರೇ ಎಂದು ಸಲೀಂ ಅಹಮದ್ ಪ್ರಶ್ನಿಸಿದ್ದಾರೆ. ಸತ್ಯವನ್ನು ಎದುರಿಸಲಾಗದೆ ಯಡಿಯೂರಪ್ಪ ಸರ್ಕಾರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಲು ಹೊರಟಿದೆ ಎಂದು ದೂರಿದ್ದಾರೆ.
ಕಾಂಗ್ರೆಸ್ ವಕ್ತಾರ ಲಕ್ಷ್ಮಣ್ ಅವರು ಮಾಡಿದ ಆರೋಪಗಳಿಗೆ ಉತ್ತರ ನೀಡಲಾಗದೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವುದು ಖಂಡನೀಯ. ಭ್ರಷ್ಟಾಚಾರದಲ್ಲಿ ತೊಡಗಿರುವ ಬಿಜೆಪಿ ಸರ್ಕಾರ ಪೊಲೀಸ್ ಇಲಾಖೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಸಲೀಂ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಷ್ಮಣ್ ವಿರುದ್ಧ ವಕೀಲರಾದ ಜಿ.ದೇವೇಗೌಡ ಅವರು ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ.ಆರೋಪಗಳಿಂದ ರಾಘವೇಂದ್ರ ಅವರ ಗೌರವಕ್ಕೆ ಧಕ್ಕೆಯಾಗಿದೆ ಎಂದು ದೇವೇಗೌಡ ಅವರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
ಬಿಜೆಪಿ ಶಾಸಕರು ಬಿ.ವೈ.ರಾಘವೇಂದ್ರ ಅವರ ವಿರುದ್ಧ ಅವರ ಪಕ್ಷದ ಹೈಕಮಾಂಡ್ಗೆ ಬರೆದಿದ್ದಾರೆ ಎಂದು ಹೇಳಲಾದ ಪತ್ರವನ್ನು ಲಕ್ಷ್ಮಣ್ ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಆದರೆ ಅದು ನಕಲಿಯಾಗಿದೆ. ಬಿಜೆಪಿ ಶಾಸಕರು ಸಹಿಗಳನ್ನು ನಕಲಿ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.