ನವದೆಹಲಿ, ಸೆ. 05 (DaijiworldNews/MB) : ಗಡಿ ವಾಸ್ತವ ರೇಖೆಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲು ಒಪ್ಪದೆ ಚೀನಾ ತನ್ನ ದ್ವಿಪಕ್ಷೀಯ ಒಪ್ಪಂದವನ್ನು ಮುರಿಯುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮಾಸ್ಕೊದಲ್ಲಿ ಅಲ್ಲಿನ ರಕ್ಷಣಾ ಸಚಿವರ ಜೊತೆ ನಡೆಸಿದ ಸಭೆಯಲ್ಲಿ ಹೇಳಿದ್ದಾರೆ ಎಂದು ವರದಿಯಾಗಿದೆ.
ಶುಕ್ರವಾರ ಮಾಸ್ಕೋದಲ್ಲಿ ಚೀನಾ ಹಾಗೂ ಭಾರತದ ರಕ್ಷಣಾ ಸಚಿವರ ನಡುವೆ ಸುಮಾರು ಎರಡೂವರೆ ಗಂಟೆ ಕಾಲ ಸಭೆ ನಡೆದಿದ್ದು ಇತ್ತೀಚೆಗೆ ಗಡಿಯಲ್ಲಿ ಉಂಟಾದ ಉದ್ವಗ್ನತೆ ಬಳಿಕ ಇದು ಮೊದಲ ಮುಖಾಮುಖಿ ಭೇಟಿಯಾಗಿದ್ದು ಮಹತ್ವದ ಮಾತುಕತೆ ನಡೆದಿದೆ.
''ಗಡಿಯಲ್ಲಿ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಲು ಒಪ್ಪದೆ ಚೀನಾವು ದ್ವಪಕ್ಷೀಯ ಒಪ್ಪಂದಗಳನ್ನು ಉಲ್ಲಂಘಿಸಿದಂತೆ ಆಗುತ್ತದೆ. ಚೀನಾದ ಈ ನಡೆಯನ್ನು ಭಾರತ ಒಪ್ಪಲು ಸಾಧ್ಯವಿಲ್ಲ. ಈ ಒಪ್ಪಂದದ ಪ್ರಕಾರವಾಗಿ ಶೀಘ್ರದಲ್ಲೇ ನೀವು ಗಡಿಯಲ್ಲಿನ ಸೇನೆಯನ್ನು ವಾಪಾಸ್ ಕರೆಸಿಕೊಳ್ಳಿ. ಪಾಂಗೊಂಗ್ ಲೇಕ್ನಿಂದ ಹಿಡಿದು ಎಲ್ಲಾ ಗಡಿ ಪ್ರದೇಶದಲ್ಲಿ ಚೀನಾ ತನ್ನ ಸೇನೆಯನ್ನು ವಾಪಾಸ್ ತೆಗೆದುಕೊಂಡ ಬಳಿಕವೇ ಮಾತುಕತೆ ನಡೆಸಲು ಭಾರತ ಸಿದ್ದ'' ಎಂದು ರಾಜನಾಥ್ ಸಿಂಗ್ ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
''ಗಡಿ ನಿರ್ವಹಣೆ ಬಗ್ಗೆ ಈಗಾಗಲೇ ಭಾರತವು ಜವಾಬ್ದಾರಿಯುತವಾದ ನಡೆ ತೆಗೆದುಕೊಂಡಿದೆ. ಉಭಯ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯ ಬೆಳೆಯಲು, ಶಾಂತಿ ಹಾಗೂ ಭಾತೃತ್ವ ವೃದ್ಧಿಸಲು ಸಹಮತ ಅತ್ಯಗತ್ಯ. ನಮ್ಮೊಳಗೆ ಭಿನ್ನಾಭಿಪ್ರಾಯ ಬೆಳೆದು ಅದು ವಿವಾದವಾಗಲು ಬಿಡುವುದು ಬೇಡ. ಸಮಸ್ಯೆಯನ್ನು ಇನ್ನಷ್ಟು ಜಠಿಲ ಮಾಡದಿರುವುದು ಒಳ್ಳೆಯದು'' ಎಂದು ಹೇಳಿದ್ದಾರೆ.