ನವದೆಹಲಿ, ಸೆ 05 (DaijiworldNews/PY): ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಕಾಂಗ್ರೆಸ್ ಹಿರಿಯ ಮುಖಂಡ ಪಿ. ಚಿದಂಬರಂ ಅವರು ಕೇಂದ್ರ ಸರ್ಕಾರದ ವಿರುದ್ದ ಶನಿವಾರ ವಾಗ್ದಾಳಿ ನಡೆಸಿದ್ದು, ಲಾಕ್ಡೌನ್ ಕಾರ್ಯತಂತ್ರದ ಲಾಭ ಗಳಿಸದ ಏಕೈಕ ದೇಶ ಭಾರತ. ಸೆಪ್ಟೆಂಬರ್ ಅಂತ್ಯದ ವೇಳೆ ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ 65 ಲಕ್ಷಕ್ಕೆ ತಲುಪಬಹುದು ಎಂದಿದ್ದಾರೆ.
ಸೆಪ್ಟೆಂಬರ್ ಅಂತ್ಯದ ವೇಳೆ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 55 ಲಕ್ಷ ತಲುಪಬಹುದು ಎಂದು ನಾನು ಊಹೆ ಮಾಡಿದ್ದೆ. ಆದರೆ, ಆ ಊಹೆ ತಪ್ಪು. ಸೆಪ್ಟೆಂಬರ್ 20ರ ವೇಳೆಗೆ ಭಾರತ ಆ ಸಂಖ್ಯೆಯನ್ನು ತಲುಪುವ ಸಾಧ್ಯತೆ ಇದ್ದು, ಅಲ್ಲದೆ, ಸೆಪ್ಟೆಂಬರ್ ಅಂತ್ಯದವೇಳೆಗೆ ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 65 ಲಕ್ಷ ತಲುಪುವ ಸಾಧ್ಯತೆ ಇದೆ ಎಂದು ಅವರು ಅಂದಾಜಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ದೇಶದಲ್ಲಿ ಶನಿವಾರ ಕೋವಿಡ್ ಸೋಂಕಿತರ ಸಂಖ್ಯೆ 40 ಲಕ್ಷ ದಾಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ ಬೆನ್ನಲ್ಲೆ ಚಿದರಂಬರಂ ಅವರು ಕೇಂದ್ರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸೆಪ್ಟೆಂಬರ್ 30ರ ವೇಳೆಗೆ ಕೊರೊನಾ ಪ್ರಕರಣಗಳ ಸಂಖ್ಯೆ 65 ಲಕ್ಷ ತಲುಪಬಹುದು ಎಂದಿದ್ದಾರೆ.
ಲಾಕ್ಡೌನ್ ಕಾರ್ಯತಂತ್ರದ ಲಾಭವನ್ನು ಪಡೆಯದ ಏಕೈಕ ದೇಶ ಭಾರತ ಎಂದು ತೋರುತ್ತದೆ ಎಂದು ಕೇಂದ್ರದ ಮಾಜಿ ಸಚಿವ ಆರೋಪಿಸಿದ್ದು, ನಾವು 21 ದಿನಗಳಲ್ಲಿ ಕೊರೊನಾವೈರಸ್ ಅನ್ನು ಸೋಲಿಸುತ್ತೇವೆ ಎಂದು ಭರವಸೆ ನೀಡಿದ ಪ್ರಧಾನಿ (ನರೇಂದ್ರ) ಮೋದಿ, ಉಳಿದ ದೇಶಗಳು ಯಶಸ್ವಿಯಾದಂತೆ ತೋರಿದಾಗ ಈ ವಿಚಾರವಾಗಿ ಭಾರತ ಏಕೆ ವಿಫಲವಾಯಿತು ಎಂಬುದನ್ನು ವಿವರಿಸಬೇಕು ಎಂದು ಕೇಳಿದ್ದಾರೆ.