ಹೊಸದಿಲ್ಲಿ, ಸೆ.05(DaijiworldNews/HR): ಚೀನಾದ ಪಬ್ಜಿ ಮೊಬೈಲ್ ಆ್ಯಪ್ ನಿಷೇಧ ಆದ ಬೆನ್ನಲ್ಲೇ ಅದಕ್ಕೆ ಪರ್ಯಾಯವಾಗಿ ಬೆಂಗಳೂರು ಮೂಲದ ಎನ್ಕೋರ್ ಗೇಮ್ಸ್ ಕಂಪನಿ ಫೌ-ಜಿ ಎಂಬ ಹೆಸರಿನ ಗೇಮ್ವೊಂದು ಸದ್ಯದಲ್ಲೇ ಬಿಡುಗಡೆಗೊಳಿಸಲಿದ್ದು, ಬಾಲಿವುಡ್ ನಟ ಅಕ್ಷಯ್ ಕುಮಾರ್ ಈ ಆ್ಯಪ್ನಲ್ಲಿ ಹೂಡಿಕೆ ಮಾಡಿದ್ದು, ಟ್ವೀಟರ್ ಮೂಲಕ ಪ್ರಚಾರ ಮಾಡಲು ಮುಂದಾಗಿದ್ದಾರೆ.
ಫೌ-ಜಿ ಎನ್ನುವುದು ಫಿಯರ್ಲೆಸ್ ಆ್ಯಂಡ್ ಯುನೈಟೆಡ್ ಗಾರ್ಡ್ಸ್ ಎನ್ನುವುದರ ಸಂಕ್ಷಿಪ್ತ ರೂಪವಾಗಿದೆ. ಈ ಆ್ಯಪ್ ಅಕ್ಟೋಬರ್ ಅಂತ್ಯದ ವೇಳೆಗೆ ಬಿಡುಗಡೆ ಆಗುವ ನಿರೀಕ್ಷೆ ಇದೆ. ಪಬ್ ಜಿ ಅಂತೆಯೇ ಇಬ್ಬರಿಗಿಂತ ಹೆಚ್ಚಿನ ಜನರು ಆಡಬಹುದಾದ ಗೇಮ್ ಇದಾಗಿದ್ದು, ಈ ಆಟವನ್ನು ಭಾರತೀಯ ಭದ್ರತಾ ಪಡೆಗಳ ನೈಜ ಸಾಹಸಮಯ ಸನ್ನಿವೇಶವನ್ನು ಆಧರಿಸಿ ರೂಪಿಸಲಾಗಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ನಟ ಅಕ್ಷಯ್ ಕುಮಾರ್, ‘ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮನಿರ್ಭರ ಭಾರತ ಅಭಿಯಾನವನ್ನು ಬೆಂಬಲಿಸುವ ಆ್ಯಕ್ಷನ್ ಗೇಮ್ ಫೌ-ಜಿಯನ್ನು ಪರಿಚಯಿಸಲು ಹೆಮ್ಮೆ ಎನಿಸುತ್ತಿದೆ. ಮನರಂಜನೆಯ ಜೊತೆಗೆ ಆಟಗಾರರು ಭಾರತೀಯ ಯೋಧರ ಬಲಿದಾನದ ಬಗ್ಗೆ ತಿಳಿಯಲಿದ್ದಾರೆ. ಈ ಆ್ಯಪ್ನಿಂದ ದೊರೆಯುವ ಶೇ.20ರಷ್ಟುಆದಾಯವನ್ನು ಭಾರತ್ ವೀರ್ ಟ್ರಸ್ಟ್ಗೆ ನೀಡಲಾಗುವುದು’ ಎಂದು ಅಕ್ಷಯ್ ತಿಳಿಸಿದ್ದಾರೆ.