ಬೆಂಗಳೂರು, ಸೆ 05 (DaijiworldNews/PY): ತಮ್ಮ ಕಠಿಣ ಪರಿಶ್ರಮ ಮತ್ತು ಸೇವೆಯ ಮೂಲಕ, ಲಕ್ಷಾಂತರ ಯುವ ಮನಸ್ಸುಗಳಿಗೆ ಮಾರ್ಗದರ್ಶನ ನೀಡಿ ಭಾರತಕ್ಕೆ ಉಜ್ವಲ ಭವಿಷ್ಯವನ್ನು ನಿರ್ಮಿಸಲು ಸಹಾಯ ಮಾಡುವ ಲಕ್ಷಾಂತರ ಶಿಕ್ಷಕರಿಗೆ ಶಿಕ್ಷಕರ ದಿನಾಚರಣೆಯಂದು ಕೆಪಿಸಿಸಿ ಅಧ್ಯಕ್ಷ ಗೌರವ ಸಲ್ಲಿಸಿದ್ದು, ಏತನ್ಮಧ್ಯೆ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರದ ನಿರ್ಲಕ್ಷ್ಯದಿಂದಾಗಿ ಖಾಸಗಿ ಶಾಲೆಗಳ 40,000ಕ್ಕೂ ಹೆಚ್ಚು ಶಿಕ್ಷಕರು ಕೆಲಸ ಕಳೆದುಕೊಂಡಿರುವಾಗ, 2,00,000ಕ್ಕೂ ಹೆಚ್ಚು ಶಿಕ್ಷಕರಿಗೆ ಸಂಬಳವಿಲ್ಲದೇ ಒದ್ದಾಡುತ್ತಿರುವಾಗ, ಮಕ್ಕಳ ಭವಿಷ್ಯ ರೂಪಿಸುವವರು ತಳ್ಳುಗಾಡಿ ವ್ಯಾಪಾರ, ಗಾರೆ ಕೆಲಸ ಮಾಡುವಾಗ ಶಿಕ್ಷಣ ಕ್ಷೇತ್ರವನ್ನು ಸರಿದಾರಿಗೆ ತರಲು ಸರ್ಕಾರದ ಪ್ಲಾನ್ ಏನು ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ 80 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ.62.5ರಷ್ಟು ಮಕ್ಕಳಿಗೆ ಮಾತ್ರ ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ನ ಲಭ್ಯತೆ ಇದೆ. ಶೇ.53.75ರಷ್ಟು ಮಕ್ಕಳಿಗೆ ಮಾತ್ರ ಇಂಟರ್ನೆಟ್ ಸಂಪರ್ಕ ಲಭ್ಯವಿದೆ. ಈ ಎಲ್ಲಾ ತಂತ್ರಜ್ಞಾನದ ಲಭ್ಯತೆ ಇಲ್ಲದ ಮಕ್ಕಳು ಆನ್ಲೈನ್ ಶಿಕ್ಷಣ ಪಡೆಯುವುದಾದರೂ ಹೇಗೆ ಎಂದು ಕೇಳಿದ್ದಾರೆ.
ಈ ಕುರಿತಂತೆ ಸರ್ಕಾರ ಈ ಕೂಡಲೇ ನಿದ್ದೆಯಿಂದೆದ್ದು ಹಳಿತಪ್ಪಿರುವ ಶಿಕ್ಷಣದ ವ್ಯವಸ್ಥೆಯನ್ನು ಸರಿದಾರಿಗೆ ತರಲು ಹಾಗೂ ಶಿಕ್ಷಕರಿಗೆ ನೆರವಾಗಲು ಕಾಂಗ್ರೆಸ್ಸಿನ ಹಕ್ಕೊತ್ತಾಯಗಳನ್ನು ಮುಂದಿಡುತ್ತಿದ್ದೇನೆ ಎಂದಿದ್ದಾರೆ.