ಹೊಸಕೋಟೆ , ಸೆ.05(DaijiworldNews/HR): ಕರ್ನಾಟಕದಲ್ಲಿ ಇನ್ನು ಕೆಲವೇ ದಿನಗಳಲ್ಲಿ 1 ಲಕ್ಷ ಕೋವಿಡ್ ಟೆಸ್ಟ್ ಗುರಿ ತಲುಪಲಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಈ ಬಗ್ಗೆ ಹೊಸಕೋಟೆಯಲ್ಲಿರುವ ಎಂವಿಜೆ ಮೆಡಿಕಲ್ ಕಾಲೇಜು ಹಾಗೂ ರೀಸರ್ಚ್ ಹಾಸ್ಪಿಟಲ್ನಲ್ಲಿ ಎಂವಿಜೆ "ಕೋವಿಡ್ ಲ್ಯಾಬ್" ಉದ್ಘಾಟಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣದಲ್ಲಿ ರಾಜ್ಯ ಸರಕಾರ ಬದ್ಧತೆ ಪ್ರದರ್ಶಿಸಿದೆ. ಕೇವಲ ಒಂದು ಲ್ಯಾಬ್ನಿಂದ ಪ್ರಾರಂಭವಾದ ಕೊವಿಡ್ ಟೆಸ್ಟ್ , ಆರೇ ತಿಂಗಳಲ್ಲಿ 108 ಲ್ಯಾಬ್ಗಳನ್ನು ತೆರೆದಿದ್ದೇವೆ. ಪ್ರಾರಂಭದಲ್ಲಿ ಸುಮಾರು 300 ಕೋವಿಡ್ ಟೆಸ್ಟ್ನಿಂದ 75 ಸಾವಿರಕ್ಕೆ ಏರಿಕೆಯಾಗಿದೆ. ಇನ್ನು ಕೆಲವೇ ದಿನಗಳಲ್ಲಿ ದಿನಕ್ಕೆ ಲಕ್ಷ ಕೋವಿಡ್ ಟೆಸ್ಟ್ ಗುರಿ ತಲುಪಲಿದ್ದೇವೆ ಎಂದು ವಿವರಿಸಿದರು.
ಕೊರೊನಾಗೆ ಲಸಿಕೆ ಲಭ್ಯವಾದಾಗ ಮಾತ್ರ ಸಂಪೂರ್ಣ ನಿಗ್ರಹಿಸಲು ಸಾಧ್ಯ . ಸಮಾಧಾನದ ಸಂಗತಿ ಎಂದರೆ ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ. 1.65 ರಷ್ಟಿದ್ದು,ಇದನ್ನು ಶೇ.1 ಕ್ಕಿಂತ ಕಡಿಮೆ ಮಾಡುವ ಗುರಿ ಹೊಂದಿದ್ದೇವೆ ಎಂದರು.
ಇನ್ನು ವೈದ್ಯಕೀಯ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಾಕಷ್ಟು ಬದಲಾವಣೆ ಅನಿವಾರ್ಯವಿದ್ದು, ನಮ್ಮಲ್ಲಿ 60 ವೈದ್ಯಕೀಯ ಕಾಲೇಜುಗಳಿವೆ. ವರ್ಷಕ್ಕೆ 10 ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಕಾಲೇಜಿನ ಸಂಖ್ಯೆ ಹೆಚ್ಚಿಸಿದರೆ ಸಾಲದು ಗುಣಮಟ್ಟದ ಶಿಕ್ಷಣ ಕೊಡಿಸುವುದು ಅನಿವಾರ್ಯವಾಗಿದೆ. ಹೀಗಾಗಿ ಮುಂದುವರೆದ ದೇಶಗಳಲ್ಲಿ ವೈದ್ಯಕೀಯ ಶಿಕ್ಷಣ ವ್ಯವಸ್ಥೆಯನ್ನು ಅಧ್ಯಯನ ನಡೆಸಿ, ಜಾಗತಿಕ ಮಟ್ಟದ ಗುಣಮಟ್ಟ ಶಿಕ್ಷಣವನ್ನು ಇಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎಂದರು.