ಶ್ರೀನಗರ, ಸೆ 05 (DaijiworldNews/PY): ಹಿಜ್ಬುಲ್ ಮುಜಾಹುದ್ದೀನ್ ಉಗ್ರ ಸಂಘಟನೆ ಉತ್ತರ ಕಾಶ್ಮೀರದಲ್ಲಿ ತನ್ನ ನೆಲೆಯನ್ನು ಪುನಃ ಸ್ಥಾಪಿಸಲು ಯತ್ನಿಸುತ್ತಿದೆ ಎಂದು ಶನಿವಾರ ಸೇನೆ ತಿಳಿಸಿದೆ.
ಶುಕ್ರವಾರ ಬಾರಾಮುಲ್ಲಾ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಮೂವರು ಉಗ್ರರು ಹತರಾಗಿದ್ದು, ಈ ವಿಚಾರವಾಗಿ ಉತ್ತರ ಕಾಶ್ಮೀರ ಪ್ರದೇಶದ ಐಜಿಪಿ ಮುಹಮ್ಮದ್ ಸುಲೈಮಾನ್ ಚೌಧರಿ ಅವರೊಂದಿಗೆ ಶನಿವಾರ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸೇನೆಯ ರಾಷ್ಟ್ರೀಯ ರೈಫಲ್ಸ್ನ ಕಮಾಂಡರ್ ಬ್ರಿಗೇಡಿಯರ್ ಎನ್.ಕೆ.ಮಿಶ್ರಾ ಅವರು, ಎಚ್ಎಂಗೆ ಸೇರಿದ ಉಗ್ರರನ್ನು ಹತ್ಯೆ ಮಾಡಲಾಗಿದೆ. ಉತ್ತರ ಕಾಶ್ಮೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಲಷ್ಕರ್-ಎ-ತೋಯ್ಬಾ ಹಾಗೂ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆಯನ್ನು ಮಾತ್ರ ತಟಸ್ಥಗೊಳಿಸಲಾಗಿತ್ತು ಎಂದು ಹೇಳಿದರು.
ಈ ಭಾಗದಲ್ಲಿ ಇದೀಗ ತನ್ನ ನೆಲೆಯನ್ನು ಪುನಃ ಸ್ಥಪಿಸಲು ಹಿಜ್ಬುಲ್ ಮುಜಾಹುದ್ದೀನ್ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.
ಈ ಬಗ್ಗೆ ಭದ್ರತಾ ಪಡೆಗಳು ಎಚ್ಚರವಾಗಿರುತ್ತವೆ. ಅಲ್ಲದೇ, ಈ ಉಗ್ರರ ಯೋಜನೆಗಳನ್ನು ನಾಶಪಡಿಸಲು ಸೇನೆ ಸಿದ್ದವಾಗಿದೆ. ಇನ್ನು ಸಮಾಜದ ಮುಖ್ಯವಾಹಿನಿಗೆ ಯಾರಾದರೂ ಸೇರಲು ಬಯಸಿದರೆ, ಅವರನ್ನು ಸ್ವಾಗತಿಸಲಾಗುತ್ತದೆ. ಆದರೆ, ಭಯೋತ್ಪಾದಕರಾಗಬೇಕು ಎಂದು ಯಾರಾದರೂ ಬಯಸಿದ್ದಲ್ಲಿ ಅವರಿಗೆ ಯಾವುದೇ ಅವಕಾಶವನ್ನು ನೀಡುವುದಿಲ್ಲ ಎಂದಿದ್ದಾರೆ.
ಹತ್ಯೆಗೀಡಾದ ಇಬ್ಬರು ಉಗ್ರರು ಸ್ಥಳೀಯರಾಗಿದ್ದು, ಅವರನ್ನು ಶಫ್ಕತ್ ಅಲಿ ಖಾನ್ ಹಾಗೂ ಹನಾನ್ ಬಿಲಾಲ್ ಸೋಫಿ ಎಂದು ಗುರುತಿಸಲಾಗಿದೆ. ಮೂರನೆಯವನ ಗುರುತು ಪತ್ತೆ ಮಾಡಲಾಗುತ್ತಿದೆ ಎಂದು ಹೇಳಿದರು.