ನವದೆಹಲಿ,ಸೆ 6(DaijiworldNews/HR): ಕೋವಿಡ್ ಸಾಂಕ್ರಾಮಿಕದ ನಡುವೆ ದೇಶದ ಆರ್ಥಿಕ ಪರಿಸ್ಥಿತಿ ಕುಸಿಯುತ್ತಿರುವಾಗ ಸರ್ಕಾರಿ ಅಧಿಕಾರಿಗಳು ಖರ್ಚುವೆಚ್ಚಗಳಲ್ಲಿ ಕಡಿತ ಮಾಡಬೇಕೆಂದು ಖರ್ಚುವೆಚ್ಚಗಳ ಇಲಾಖೆ ಹೊರಡಿಸಿರುವ ಸುತ್ತೋಲೆ ಸರ್ಕಾರಿ ಉದ್ಯೋಗಗಳ ನೇಮಕಾತಿಯ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ. ಸರ್ಕಾರದ ಇಲಾಖೆಗಳಲ್ಲಿ ಹುದ್ದೆಗಳ ನೇಮಕಾತಿಗೆ ಯಾವುದೇ ನಿರ್ಬಂಧ ವಿಧಿಸಿಲ್ಲ. ಸ್ಟಾಫ್ ಸೆಲೆಕ್ಷನ್ ಕಮಿಷನ್, ಯುಪಿಎಸ್ ಸಿ, ರೈಲ್ವೆ ನೇಮಕಾತಿ ಮಂಡಳಿ ಮೊದಲಾದವುಗಳ ಮೂಲಕ ಹಿಂದಿನಂತೆಯೇ ನೇಮಕಾತಿ ಪ್ರಕ್ರಿಯೆ ನಡೆಯಲಿದೆ ಎಂದು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದೆ.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟ್ವೀಟ್ ಗೆ ಹಣಕಾಸು ಸಚಿವಾಲಯ ಪ್ರತಿಕ್ರಿಯಿಸಿ, ಸೆ.4ರಂದು ಹೊರಡಿಸಿರುವ ಖರ್ಚುವೆಚ್ಚಗಳ ಇಲಾಖೆಯ ಸುತ್ತೋಲೆ ಸರ್ಕಾರದ ಇಲಾಖೆಗಳಲ್ಲಿ ಹುದ್ದೆಗಳ ನೇಮಕದ ಬಗ್ಗೆ ಆಂತರಿಕ ವಿಧಾನವನ್ನು ಅಳವಡಿಸಿಕೊಂಡಿದೆಯೇ ಹೊರತು ನೇಮಕಾತಿ ವಿಧಾನದ ಮೇಲೆ ಯಾವುದೇ ರೀತಿಯ ಅಡ್ಡ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದೆ.
ಈ ಸುತ್ತೋಲೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು. ಮೋದಿ ಸರ್ಕಾರ ಖಾಸಗೀಕರಣ ಬಗ್ಗೆ ಹೆಚ್ಚು ಯೋಚಿಸುತ್ತಿದ್ದು ಸರ್ಕಾರದ ಇಲಾಖೆಗಳ ಬಗ್ಗೆ ಕಾಳಜಿ ಹೊಂದಿಲ್ಲ. ಸರ್ಕಾರಕ್ಕೆ ಕೊರೊನಾವನ್ನು ನೆಪವಾಗಿಟ್ಟುಕೊಂಡು, ಸರ್ಕಾರದ ಎಲ್ಲಾ ಶಾಶ್ವತ ಸಿಬ್ಬಂದಿಯನ್ನು ಕೆಲಸದಿಂದ ತೆಗೆದುಹಾಕಲು ಸರ್ಕಾರ ನೋಡುತ್ತಿದ್ದು, ಯುವಕರ ಭವಿಷ್ಯವನ್ನು ಮೋದಿಯವರು ಕಸಿಯಲು ನೋಡುತ್ತಿದ್ದಾರೆ ಎಂದು ರಾಹುಲ್ ಟ್ವೀಟ್ ಮಾಡಿದ್ದರು.