ಬೆಂಗಳೂರು, ಸೆ 6(DaijiworldNews/HR): ಕರ್ನಾಟಕದಲ್ಲಿ ಡ್ರಗ್ ದಂಧೆಯ ವಿರುದ್ಧ ಸಮರ ಸಾರಲು ಬಿಜೆಪಿ ಸಜ್ಜಾಗಿದ್ದು ರಾಜ್ಯದ ಪ್ರತಿಯೊಬ್ಬ ಕನ್ನಡಿಗರೂ ಸರ್ಕಾರ ಜೊತೆ ಕೈಜೋಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಡ್ರಗ್ ದಂಧೆ, ಅಕ್ರಮ ವಹಿವಾಟು ಜಾಲದಲ್ಲಿ ತೊಡಗಿಸಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ತನಿಖೆ ನಡೆಸುತ್ತಿದ್ದು ಅದಕ್ಕೆ ವೇಗ ಪಡೆದುಕೊಳ್ಳಲು ರಾಜ್ಯ ಸರ್ಕಾರ ಎಲ್ಲಾ ರೀತಿಯಲ್ಲಿಯೂ ನೆರವು ನೀಡಲಿದೆ ಎಂದರು.
ಮಾದಕ ದ್ರವ್ಯ ಮುಕ್ತ ರಾಜ್ಯವಾಗುವುದನ್ನು ನೋಡಲು ಬಿಜೆಪಿ ಸನ್ನದ್ದವಾಗಿದ್ದು. ಈ ಪಿಡುಗನ್ನು ನಿರ್ಮೂಲನೆ ಮಾಡಬೇಕೆಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸೇರಿದಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಹ ವಿಶೇಷ ಕಾಳಜಿ ವಹಿಸಿದ್ದಾರೆ. ಈ ಅಪಾಯಕಾರಿ ಪಿಡುಗಿನಲ್ಲಿ ತೊಡಗಿರುವ ಯಾರೇ ಆಗಲಿ ಎಲ್ಲರನ್ನೂ, ಎಷ್ಟೇ ದೊಡ್ಡವರಾಗಿರಲಿ ಅವರ ಸಾಮಾಜಿಕ, ರಾಜಕೀಯ ಪ್ರಭಾವ, ಸ್ಥಾನಮಾನದ ಹೊರತಾಗಿಯೂ ಕಾನೂನು ವ್ಯಾಪ್ತಿಗೆ ತರಲೇಬೇಕು. ಮಾದಕ ದ್ರವ್ಯ ಮಾಫಿಯಾ ವಿರುದ್ಧ ಹೋರಾಟದಲ್ಲಿ ಸರ್ಕಾರದ ಪ್ರಯತ್ನಗಳಿಗೆ ಪೂರಕವಾಗಿ ಬಿಜೆಪಿ ಕೈಜೋಡಿಸುತ್ತದೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.