ನವದೆಹಲಿ, ಸೆ 06 (DaijiworldNews/PY): ಮೇಕ್ ಇನ್ ಇಂಡಿಯಾ ಅಭಿಯಾನದ ಉಪಕ್ರಮಕ್ಕೆ ಭಾರತ ಸರ್ಕಾರ ಹಾಗೂ ಸಶಸ್ತ್ರ ಪಡೆಗಳು ತಮ್ಮ ಸಂಕಲ್ಪ ಹಾಗೂ ಬದ್ದತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿವೆ ಎಂದು ರಕ್ಷಣಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.
ರಕ್ಷಣಾ ರಫ್ತಿನ ಕುರಿತ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಅವರು, ಇಂದು ಭಾರತೀಯ ರಕ್ಷಣಾ ವಲಯವು ಹೊರಹೊಮ್ಮಲು ಮುಂದಾಗಿದೆ. ಸರ್ಕಾರ ಹಾಗೂ ಭಾರತೀಯ ಸಶಸ್ತ್ರ ಪಡೆಗಳು ಮೇಕ್ ಇನ್ ಇಂಡಿಯಾ ರಕ್ಷಣಾ ಉಪಕ್ರಮಕ್ಕೆ ತಮ್ಮ ಸಂಕಲ್ಪ ಹಾಗೂ ಬದ್ದತೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿವೆ. ನಾವು ದೇಶದ ಯುದ್ದಗಳನ್ನು ಗೆಲ್ಲಲು ಭಾರತೀಯ ಪರಿಹಾರಗಳೊಂದಿಗೆ ಸಂಪೂರ್ಣವಾಗಿ ಬದ್ದರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಈ ಯುಗದಲ್ಲಿ ಬಹು ಆಯಾಮದ ತಂತ್ರಜ್ಞಾನದ ವಿರೋಧಿಗಳಿಗಿಂತ ನಮ್ಮನ್ನು ಮುಂದಿಡುವ ಸಲುವಾಗಿ ನಾವು ನಿರಂತರ ಆವಿಷ್ಕಾರಗಳು ಹಾಗೂ ಆಧುನಿಕ ತಾಂತ್ರಿಕ ಪರಿಹಾರಗಳತ್ತ ಗಮನ ಹರಿಸಬೇಕು. ನಮ್ಮ ದೇಶದ ಸ್ಥೂಲ-ಆರ್ಥಿಕ ನಿಯತಾಂಕಗಳನ್ನು ಮತ್ತು ಸಾಮಾಜಿಕ-ಆರ್ಥಿಕ ಅವಶ್ಯಕತೆಗಳನ್ನು ಗಮನದಲ್ಲಿಟ್ಟುಕೊಂಡು ನಾವು ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಕಟ್ಟಡದಲ್ಲಿ ಡಿಎಂಎ ಸ್ಥಾಪನೆಯಿಂದ ಸೇನೆಗೂ ಪ್ರಮುಖ ಸ್ಥಾನ ಸಿಕ್ಕಿದಂತಾಗಿದೆ. ಅಲ್ಲದೇ, ರಕ್ಷಣಾ ಸಚಿವಾಲಯದ ಪುನರಚನೆಯ ತಂತ್ರಗಳನ್ನು ಅಳವಡಿಸಿಕೊಳ್ಳುವ ಅವಕಾಶವನ್ನು ನೀಡುತ್ತದೆ ಎಂದಿದ್ದಾರೆ.