ಹೊಸದಿಲ್ಲಿ,ಸೆ 6(DaijiworldNews/HR): ಭಾರತದಲ್ಲಿ ವಾಹನೋದ್ಯಮದ ಉತ್ತೇಜನಕ್ಕೆ ಪೂರಕವಾಗಿ ಹಳೆಯ, ಮಾಲಿನ್ಯಕಾರಕ ವಾಹನಗಳ ವಿಲೇವಾರಿಗೆ “ಗುಜರಿ ನೀತಿ’ ಈ ತಿಂಗಳಾಂತ್ಯದಲ್ಲಿ ಜಾರಿಗೆ ಬರಲಿದೆ. ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಅದಕ್ಕೆ ಹಣಕಾಸಿನ ನೆರವು ನೀಡುವುದರ ಜತೆಗೆ ಹೊಸ ವಾಹನದ ಖರೀದಿಗೆ ಉತ್ತೇಜಿಸುವುದು ಈ ಯೋಜನೆಯ ಮೂಲ ಉದ್ದೇಶ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕಿದರೆ, ಹೊಸ ವಾಹನಗಳಿಗೆ ಬೇಡಿಕೆ ಬರುತ್ತದೆ. ಆಗ ತನ್ನಿಂತಾನೇ ವಾಹನೋದ್ಯಮ ಚೇತರಿಸಿಕೊಳ್ಳುತ್ತದೆ. ಅದಕ್ಕಾಗಿ ಅಂತಹ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಜಾರಿ ಮಾಡಬೇಕೆನ್ನುವುದು ವಾಹನೋದ್ಯಮಿಗಳ ಒತ್ತಾಯ. ಗುಜರಿ ನೀತಿ ಜಾರಿಗೆ ಬಂದರೆ, 2020-21ರ ವಿತ್ತೀಯ ವರ್ಷದಲ್ಲಿ 90 ಲಕ್ಷ ವಾಹನಗಳು, 2025ರೊಳಗೆ 2.8 ಕೋಟಿ ವಾಹನಗಳು ಸಂಚಾರ ನಿಲ್ಲಿಸಲಿವೆ. ಈ ಹಳೆಯ ವಾಹನಗಳ ಬಿಡಿ ಉಪಕರಣ ಗಳನ್ನು ಮರುಬಳಕೆ ಮಾಡಲು ಅಗತ್ಯ ಘಟಕಗಳಿಗೆ ಉತ್ತೇಜನ ನೀಡಲಾಗುವುದು ಎಂದರು.
ಅಮೆರಿಕದಲ್ಲಿ ಜಾರಿಯಲ್ಲಿರುವ “ಕ್ಯಾಷ್ ಫಾರ್ ಕ್ಲಂಕರ್ಸ್’ನ ಭಾರತೀಯ ರೂಪ ಇದಾಗಿದ್ದು, ಯಾವುದೇ ವಾಹನದ ಆಯಸ್ಸು 15 ವರ್ಷ ಪೂರ್ಣಗೊಂಡರೆ ಅವುಗಳ ಮರುಮಾರಾಟ ಬೆಲೆ ಪರಿಪೂರ್ಣ ಕುಸಿದಿರುತ್ತದೆ. ಅವುಗಳನ್ನು ಗುಜರಿಗೆ ಹಾಕುವ ಈ ಯೋಜನೆಯಿಂದ ಎರಡು ಲಾಭ- ವಾಹನ ಮಾಲಕರಿಗೆ ಹಣಕಾಸಿನ ನೆರವು ಸಿಗುತ್ತದೆ ಮತ್ತು ಹೊಗೆ ಉಗುಳುವ ಇಂಥ ವಾಹನಗಳ ನಿವಾರಣೆಯಿಂದ ಪರಿಸರ ಶುದ್ಧವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹೊಸ ವಾಹನಗಳ ಖರೀದಿ ಹೆಚ್ಚುತ್ತದೆ.