ರಾಯ್ಪುರ, ಸೆ 6(DaijiworldNews/HR): ಛತ್ತೀಸಗಢದ ಕೆಲವೆಡೆ ನಕ್ಸಲರ ಅಟ್ಟಹಾಸ ಮುಂದುವರೆದಿದ್ದು, ಬಿಜಾಪುರ್ ಜಿಲ್ಲೆಯಲ್ಲಿ ಪೊಲೀಸ್ ಮಾಹಿತಿದಾರರೆಂಬ ಸಂಶಯದಿಂದ ನಕ್ಸಲರು ನಾಲ್ವರು ಗ್ರಾಮಸ್ಥರನ್ನು ಹತ್ಯೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು, ಬಿಜಾಪುರ್ ಜಿಲ್ಲೆಯ ಗಂಗ್ಲೂರ್ ಪೊಲೀಸ್ ಠಾಣೆ ದುಮ್ರಿ ಪಲ್ನರ್ ಗ್ರಾಮಗಳ ನಡುವಣ ಅರಣ್ಯ ಪ್ರದೇಶದಲ್ಲಿ ನಕ್ಸಲರು ನಾಲ್ವರು ಗ್ರಾಮಸ್ಥರನ್ನು ಭೀಕರವಾಗಿ ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಪನೇಮ್ ಸನ್ನು, ಗೋರೆ ಸನ್ನು, ಆಯಿಟ್ಟು ಅಲಿಯಾಸ್ ಪಲ್ಲಿ ಮತ್ತು ಬಶ್ಕು ಅಲಿಯಾಸ್ ತುಳಸಿ ಎಂಬುವವರು ನಕ್ಸಲರಿಂದ ಹತ್ಯೆಯಾದವರು. ಇವರೆಲ್ಲರೂ ಪುಸ್ನರ್ ಹಾಗೂ ಮೆಟಪಲ್ ಗ್ರಾಮದವರು ಎಂದು ಐಜಿಪಿ ಸುಂದರ್ರಾಜ್ ತಿಳಿಸಿದ್ದಾರೆ.
ಹತ್ಯಾಕಾಂಡದ ಸುದ್ದಿ ತಿಳಿಯುತ್ತಿದ್ದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳೆದ ಕೆಲವು ದಿನಗಳಿಂದ ಬಸ್ತಾರ್ ವಲಯದಲ್ಲಿ ಗ್ರಾಮಸ್ಥರ ಮೇಲೆ ನಕ್ಸಲರ ದೌರ್ಜನ್ಯ ಮತ್ತು ಹಿಂಸಾಚಾರ ಪ್ರಕರಣಗಳು ಹೆಚ್ಚಾಗುತ್ತಿದೆ.