ನವದೆಹಲಿ, ಸೆ 06 (DaijiworldNews/PY): ಜಿಡಿಪಿಯ ಐತಿಹಾಸಿಕ ಕುಸಿತಕ್ಕೆ ಮತ್ತೊಂದು ಪ್ರಮುಖ ಕಾರಣವೆಂದರೆ ಅದು ಮೋದಿ ಸರ್ಕಾರದ ಗಬ್ಬರ್ ಸಿಂಗ್ ಟ್ಯಾಕ್ಸ್ (ಜಿಎಸ್ಟಿ) ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮೂಲಕ ವಿಡಿಯೋವೊಂದನ್ನು ಬಿಡುಗಡೆ ಮಾಡಿರುವ ಅವರು, ಆರ್ಥಿಕತೆಯನ್ನು ಮೋದಿ ಸರ್ಕಾರ ನಾಶ ಮಾಡಿದ್ದು ಹೇಗೆ? ಎನ್ನುವ ಬಗ್ಗೆ ತಿಳಿಸಿದ್ದು, ಜಿಎಸ್ಟಿ ಎನ್ನುವುದು ತೆರಿಗೆ ವ್ಯವಸ್ಥೆಯಲ್ಲಿ ಬದಲಾಗಿ ಅದು ಬಡವರ ಮೇಲೆ ಮಾಡುವ ದಾಳಿಯಾಗಿದೆ ಎಂದಿದ್ದಾರೆ.
ಜಿಎಸ್ಟಿಯು, ಲಕ್ಷಾಂತರ ಸಣ್ಣು ಉದ್ಯಮಗಳು ಸೇರಿದಂತೆ ಉದ್ಯೋಗಗಳನ್ನು, ಯುವಕರ ಭವಿಷ್ಯವನ್ನು ಹಾಗೂ ರಾಜ್ಯಗಳ ಆರ್ಥಿಕ ಪರಿಸ್ಥಿತಿಯನ್ನು ನಾಶ ಪಡಿಸಿದೆ ಎಂದಿದ್ದಾರೆ.
ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತ್ ಆರ್ಥಿಕ ಬೆಳವಣಿಗೆಯು ದಾಖಲೆಯ ಕುಸಿತ ಕಂಡಿದ್ದು, ಜಿಡಿಪಿ ಬೆಳವಣಿಗೆ ದರ ಶೇ.29.9ಕ್ಕೆ ಇಳಿಕೆಯಾಗಿದೆ. ಇದು ಜಿಎಸ್ಟಿಯು ಆರ್ಥಿಕತೆಯ ಅನೌಪಚಾರಿಕ ವಲಯದ ಮೇಲಿನ ಎರಡನೇ ದಾಳಿಯಾಗಿದೆ ಎಂದು ಹೇಳಿದ್ದಾರೆ.
ಒಂದು ತೆರಿಗೆ, ಕನಿಷ್ಠ ತೆರಿಗೆ, ಪ್ರಾಮಾಣಿಕ ತೆರಿಗೆ ಹಾಗೂ ಸರಳ ತೆರಿಗೆ ಎನ್ನುವುದು ಯುಪಿಎ ಸರ್ಕಾರದ ಪರಿಕಲ್ಪನೆಯಾಗಿತ್ತು. ಆದರೆ, ಎನ್ಡಿಎ ಸರ್ಕಾರದ ಪರಿಕಲ್ಪನೆ ಭಿನ್ನವಾಗಿದೆ ಎಂದಿದ್ದಾರೆ.
ಮೊದಲ ಬಾರಿಗೆ ತೆರಿಗೆಯ ಮೂಲಕ ಸಂಗ್ರಹ ಮಾಡಿದ ಹಣವನ್ನು ರಾಜ್ಯಗಳಿಗೆ ನೀಡಲಾಗುತ್ತಿಲ್ಲ. ಹಾಗಾಗಿ ರಾಜ್ಯ ಸರ್ಕಾರಗಳೀಗೆ ಶಿಕ್ಷಕರು ಸೇರಿದಂತೆ ಇತರ ನೌಕರರಿಗೆ ವೇತನ ಪಾವತಿ ಮಾಡಲು ಆಗುತ್ತಿಲ್ಲೆ ಎಂದು ತಿಳಿಸಿದ್ದಾರೆ.