ನವದೆಹಲಿ, ಸೆ 06 (DaijiworldNews/PY): ಜೆಇಇ ಪರೀಕ್ಷೆ ನಂತರ ಸೆ.13ರಂದು ವೈದ್ಯಕೀಯ ಕೋರ್ಸ್ಗಳ ಪ್ರವೇಶ ಪರೀಕ್ಷೆ ನಡೆಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಸಜ್ಜಾಗಿದ್ದು, ಇದಕ್ಕಾಗಿ ಸುಮಾರು 15 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ.
ಸಾಂದರ್ಭಿಕ ಚಿತ್ರ
ಎಂಜಿನಿಯರ್ ಕೋರ್ಸ್ಗಳ ಪ್ರವೇಶಕ್ಕಾಗಿ ಸೆ.1ರಂದು ಪ್ರಾರಂಭವಾದ ಜೆಇಇ ಪ್ರವೇಶ ಪರೀಕ್ಷೆ ಭಾನುವಾರ ಮುಕ್ತಾಯಗೊಂಡಿತು. ಕೊರೊನಾ ಕಾರಣದಿಂದ ಈ ಪರೀಕ್ಷೆಗಳನ್ನು ಎರಡು ಬಾರಿ ಮುಂದೂಡಲಾಗಿತ್ತು.
ಏತನ್ಮಧ್ಯೆ ನೀಟ್ ಪರೀಕ್ಷೆ ನಡೆಸಲು ಸಜ್ಜಾದ ಎನ್ಟಿಎ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಿದೆ. ಮೊದಲು 2,546 ಕೇಂದ್ರಳಿದ್ದವು. ಈಗ ಅವುಗಳ ಸಂಖ್ಯೆಯನ್ನು 3,843ಕ್ಕೆ ಹೆಚ್ಚು ಮಾಡಲಾಗಿದೆ. ಅಲ್ಲದೇ, ಪ್ರತೀ ಕೊಠಡಿಯಲ್ಲಿ 24ರ ಬದಲು 12 ಮಂದಿಗೆ ಕುಳಿತುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಎನ್ಟಿಎ ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷಾ ಸಭಾಂಗಣದ ಹೊರಗೆ ಕೂಡಾ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಈ ನಿಟ್ಟಿನಲ್ಲಿ ಪರೀಕ್ಷಾ ಕೇಂದ್ರಗಳ ಹೊರಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಎನ್ಟಿಎಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.