ನವದೆಹಲಿ, ಸೆ 06 (DaijiworldNews/PY): ಕಾಸರಗೋಡು ಜಿಲ್ಲೆಯ ಜಗದ್ಗುರು ಶಂಕರಾಚಾರ್ಯ ಸಂಸ್ಥಾನಂ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಸಮುದಾಯದ ಸೇವೆಗಾಗಿ ಮತ್ತು ದೀನ ದಲಿತರನ್ನು ಸಬಲೀಕರಣಗೊಳಿಸಿದ್ದಕ್ಕಾಗಿ ಪೂಜ್ಯ ಕೇಶವಾನಂದ ಭಾರತಿ ಸ್ವಾಮೀಜಿ ಅವರನ್ನು ನಾವು ಯಾವಾಗಲೂ ನೆನಪಿಸಿಕೊಳ್ಳುತ್ತೇವೆ. ಅವರು ಭಾರತದ ಶ್ರೀಮಂತ ಸಂಸ್ಕೃತಿ ಮತ್ತು ಶ್ರೇಷ್ಠ ಸಂವಿಧಾನದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದು, ಮುಂದಿನ ತಲೆಮಾರುಗಳಿಗೆ ಸ್ಫೂರ್ತಿಯಾಗಿದ್ದಾರೆ. ಓಂ ಶಾಂತಿ ಎಂದು ಉಲ್ಲೇಖಸಿದ್ದಾರೆ.
ಕೇಶವಾನಂದ ಭಾರತೀ ಸ್ವಾಮಿ ಅವರು, ಧಾರ್ಮಿಕವಾಗಿ ಹಾಗೂ ಸಾಂಸ್ಕೃತಿಕವಾಗಿ ಸಕ್ರಿಯರಾಗಿದ್ದು, ಗಡಿನಾಡಿನ ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತದ ಕೇಂದ್ರವನ್ನಾಗಿಸಿದ್ದರು. ಸ್ವಾಮೀಜಿ ಅವರಿಗೆ, ಯಕ್ಷಗಾನ ಕಲೆಯ ಮೇಲೆ ಅತೀವ ಪ್ರೇಮವಿದ್ದು, ಸ್ವಾಮೀಜಿ ಮೇಳವನ್ನು ಮುನ್ನಡೆಸುತ್ತಾ ಸ್ವತಃ ಭಾಗವತಿಕೆಯನ್ನೂ ನಡೆಸುತ್ತಿದ್ದರು.
ಕೇಶವಾನಂದ ಸ್ವಾಮೀಜಿಯವರ ಹೆಸರು ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಚಿರಸ್ಥಾಯಿಯಾಗಿದೆ. ಕೇಶವಾನಂದ ಭಾರತಿ ವರ್ಸಸ್ ಕೇರಳ ಸರ್ಕಾರ ಪ್ರಕರಣ ಭಾರಿ ಪ್ರಸಿದ್ಧಿ ಪಡೆದಿತ್ತು. ಈ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಅತೀ ಅಪರೂಪ ಎಂಬಂತೆ 13 ಮಂದಿ ನ್ಯಾಯಾಧೀಶರ ಪೀಠ ರಚಿಸಿ ಕೈಗೊಂಡಿತ್ತು.