ಕೊಯಮತ್ತೂರು, ಸೆ.7(DaijiworldNews/HR):ಮೂರು ಹಂತದ ಕಟ್ಟಡ ಕುಸಿದು ಬಿದ್ದು ಅವಶೇಷಗಳಡಿಯಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದು ಮೂವರು ಸಿಲುಕಿ ಹಾಕಿಕೊಂಡಿರುವ ಘಟನೆ ಕೊಯಮತ್ತೂರಿನ ಚೆಟ್ಟಿ ಸ್ಟ್ರೀಟ್ ಬಳಿ ಕೆಸಿ ತೊಟ್ಟಮ್ ಎಂಬಲ್ಲಿ ನಡೆದಿದೆ.
ರಾತ್ರಿ 8.40ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ಜೋರು ಮಳೆಯಿಂದಾಗಿ ಕಟ್ಟಡ ಕುಸಿಯಿತು ಎಂದು ಹೇಳಲಾಗುತ್ತಿದ್ದು, ಕೂಡಲೇ ಅಗ್ನಿಶಾಮಕ ಮತ್ತು ಪರಿಹಾರ ತಂಡಗಳು ಸ್ಥಳಕ್ಕೆ ಧಾವಿಸಿ ಇಬ್ಬರು ಮಹಿಳೆಯರು, ಒಬ್ಬ ಪುರುಷ ಮತ್ತು 5 ವರ್ಷದ ಮಗುವನ್ನು ರಕ್ಷಿಸಿದ್ದಾರೆ.
ಮೃತಪಟ್ಟವರನ್ನು ಶ್ವೇತಾ(27 ) ಎಂದು ಗುರುತಿಸಲಾಗಿದೆ. ರಕ್ಷಣಾ ಕಾರ್ಯ ನಡೆಯುತ್ತಿರುವಾಗಲೇ ಆಕೆ ಮೃತಪಟ್ಟಿದ್ದರು. ಇನ್ನು ಅವರ 65 ವರ್ಷದ ಅತ್ತೆ ಮತ್ತು ಅತ್ತಿಗೆ ಕವಿತಾ(45) ರನ್ನು ರಕ್ಷಿಸಲಾಗಿದೆ. ಎರಡು ಗಂಟೆ ಕಳೆದ ನಂತರ ಶ್ವೇತಾಳ 5 ವರ್ಷದ ಮಗನನ್ನು ರಕ್ಷಿಸಿದ್ದಾರೆ. ಎಲ್ಲರನ್ನೂ ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಕೆ ರಾಜಮಣಿ. ನಗರ ಪೊಲೀಸ್ ಆಯುಕ್ತ ಸುಮಿತ್ ಶರಣ್, ಉಪ ಆಯುಕ್ತರಾದ ಜಿ ಸ್ಟಾಲಿನ್, ಇ ಎಸ್ ಉಮಾ ಆಗಮಿಸಿದ್ದಾರೆ.