ಅಹಮದಾಬಾದ್,ಸೆ.7(DaijiworldNews/HR): ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆದಿರುವ ಶಿವಸೇನಾ ಸಂಸದ ಸಂಜಯ್ ರಾವತ್ ಗುಜರಾತ್ ರಾಜ್ಯದ ಹೆಸರಿಗೆ ಕಳಂಕ ತರಲು ಹೊರಟಿದ್ದಾರೆ, ಹೀಗಾಗಿ ಗುಜರಾತಿಗರಲ್ಲಿ ಕ್ಷಮೆಯನ್ನು ಕೇಳಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಮುಂಬೈಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಸಂಸದ ಸಂಜಯ್ ರಾವತ್, ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೋಲಿಸುವ ಬಾಲಿವುಡ್ ನಟಿ ಕಂಗನಾ ರಾನಾವತ್ ಅವರಿಗೆ ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆಯಲು ಧೈರ್ಯವಿದೆಯೇ ಎಂದು ಕೇಳಿದ್ದರು. ಮುಂಬೈ ನಗರ ಅಸುರಕ್ಷಿತವಾಗಿದೆ ಎಂದು ಕಂಗನಾ ಆರೋಪಿಸಿದ ನಂತರ ಅವರು ಮತ್ತು ಸಂಜಯ್ ರಾವತ್ ಪರಸ್ಪರ ಮಾತಿನ ಕೆಸರೆರಚಾಟದಲ್ಲಿ ತೊಡಗಿದ್ದಾರೆ.
ಇದೀಗ ಸಂಜಯ್ ರಾವತ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗುಜರಾತ್ ಬಿಜೆಪಿ ವಕ್ತಾರ ಭರತ್ ಪಾಂಡ್ಯ, ಅಹಮದಾಬಾದನ್ನು ಮಿನಿ ಪಾಕಿಸ್ತಾನ ಎಂದು ಕರೆದು ಶಿವಸೇನಾ ನಾಯಕ ಸಂಜಯ್ ರಾವತ್ ರಾಜ್ಯಕ್ಕೆ, ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ. ಅವರು ಗುಜರಾತೀಯರು, ಅಹಮದಾಬಾದ್ ಮತ್ತು ಅಹಮದಾಬಾದೀಯರ ಕ್ಷಮೆ ಕೇಳಬೇಕು ಎಂದಿದ್ದಾರೆ.