ಬೆಂಗಳೂರು,ಸೆ.7(DaijiworldNews/HR): ಉದ್ಯಾನವನದಲ್ಲಿ ನಟಿ ಸಂಯುಕ್ತಾ ಹೆಗ್ಡೆ ಧರಿಸಿದ್ದ ಬಟ್ಟೆಗೆ ಕಾಂಗ್ರೆಸ್ ಪಕ್ಷದ ವಕ್ತಾರೆ ಕವಿತಾ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದ ವಿವಾದ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಕವಿತಾ ರೆಡ್ಡಿ ಹಾಗೂ ಇತರರು ತಮ್ಮ ಮೇಲೆ ಹಲ್ಲೆ ನಡೆಸಿ, ಅವಮಾನಿಸಿದ್ದಾರೆ ಎಂದು ಆರೋಪಿಸಿ ಸಂಯುಕ್ತಾ ಹೆಗ್ಡೆ ಎಚ್ಎಸ್ಆರ್ ಲೇಔಟ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೆ. 4ರಂದು ಅಗರ ಕೆರೆಯ ಉದ್ಯಾನ ವನದಲ್ಲಿ ಸಂಯುಕ್ತಾ ತನ್ನ ಸ್ನೇಹಿತೆಯರ ಜತೆ ವ್ಯಾಯಾಮ ಮಾಡುತ್ತಿದ್ದಾಗ ಕೆಲವರು ಆಕೆ ಧರಿಸಿದ್ದ ಉಡುಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಕವಿತಾ ರೆಡ್ಡಿಯನ್ನು ಕರೆಸಿದ್ದರು. ಇದೇ ವಿಚಾರದಲ್ಲಿ ಬಳಿಕ ವಾಗ್ವಾದ ನಡೆದಿತ್ತು. ಇಡೀ ಘಟನೆಯನ್ನು ಸಂಯುಕ್ತಾ ತನ್ನ ಇನ್ಸ್ಟಾ ಗ್ರಾಂ ಖಾತೆಯಲ್ಲಿ ಲೈವ್ ಮಾಡಿದ್ದು, ಕೆಲವರು ಸಂಯುಕ್ತಾ ಡ್ರಗ್ಸ್ ಸೇವಿಸಿದ್ದಾರೆ ಎಂದು ಆರೋಪಿಸಿದ್ದರು. ಇದನ್ನು ಸಂಯುಕ್ತಾ ನಿರಾಕರಿಸಿದ್ದರು. ಜೊತೆಗೆ ವೀಡಿಯೋದಲ್ಲಿ ಕವಿತಾ ರೆಡ್ಡಿ ಹಲ್ಲೆ ಮಾಡಲು ಮುಂದಾಗಿದ್ದುದು ಕೂಡ ಸೆರೆಯಾಗಿತ್ತು. ಇವೆಲ್ಲ ಪೊಲೀಸ್ ಸಿಬಂದಿ ಸಮ್ಮುಖದಲ್ಲಿಯೇ ನಡೆದಿತ್ತು.
ಇನ್ನು ಕವಿತಾ ರೆಡ್ಡಿಯನ್ನು ಬಂಧಿಸುವಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದರು. ಹಿರಿಯ ನಟ ಜಗ್ಗೇಶ್, ನಟಿ ರಮ್ಯಾ, ನಿರ್ದೇಶಕರಾದ ಸಿಂಪಲ್ ಸುನಿ, ಸಂತೋಷ್ ಆನಂದ್ ರಾಮ್, ನಟಿ ಪಾರುಲ್ ಯಾದವ್ ಮತ್ತು ಮೇಘನಾ ಗಾಂವ್ಕರ್ ಸೇರಿದ್ದಂತೆ ಕಲಾವಿದರು ಮತ್ತು ರಾಜಕಾರಣಿಗಳು ಸಂಯುಕ್ತಾ ಬೆಂಬಲಕ್ಕೆ ನಿಂತಿದ್ದರು.
ಇದೀಗ ಕವಿತಾ ರೆಡ್ಡಿಗೆ ಮಾಡಿದ ತಪ್ಪಿನ ಅರಿವಾಗಿ ಕ್ಷಮೆ ಕೇಳಿ, ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.