ನವದೆಹಲಿ, ಸೆ.7(DaijiworldNews/HR): ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನವು ಸಂಘಟಿತ ಹೊಣೆಗಾರಿಕೆಯಾಗಿದ್ದು, ಎಲ್ಲ ಪಾಲುದಾರರು ಅದನ್ನು ಹಾಗೆಯೇ ಸ್ವೀಕರಿಸಿ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ನರೇಂದ್ರ ಮೋದಿ ಯವರು ರಾಷ್ಟ್ರೀಯ ಶಿಕ್ಷಣ ನೀತಿ 2020ರ ಕುರಿತ ರಾಜ್ಯಪಾಲರ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿ 1986ರ ನಂತರದಲ್ಲಿ ಇದೇ ಮೊದಲ ಸಲ ಬದಲಾವಣೆ ಮಾಡಲಾಗುತ್ತಿದ್ದು, ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಆ ಮೂಲಕ ಪರಿಷ್ಕರಣೆ ಮಾಡಲಾಗಿದೆ. ಭವಿಷ್ಯದ ಉತ್ತಮ ಜೀವನಕ್ಕಾಗಿ ಪ್ರತಿಯೊಬ್ಬರೂ ಆರಂಭಿಕ ಹಂತದಿಂದಲೇ ಕೌಶಲ ಅಭಿವೃದ್ಧಿಗೆ ಒತ್ತು ನೀಡಿದ ಶಿಕ್ಷಣ ವ್ಯವಸ್ಥೆ ಜಾರಿಗೆ ಬರುತ್ತಿದೆ. ಎಲ್ಲರೂ ಅವರವರ ಆಸಕ್ತಿಗೆ ಅನುಗುಣವಾದ ವಿಷಯಗಳನ್ನೇ ಕಲಿಯಲಿದ್ದಾರೆ ಎಂದು ಪ್ರಧಾನಿ ಹೇಳಿದರು.
ಇನ್ನು ನಮ್ಮ ದೇಶವು ಪುರಾತನ ಕಾಲದಿಂದಲೂ ಶಿಕ್ಷಣಕ್ಕೆ ಹೆಸರುವಾಸಿಯಾಗಿದ್ದು, ಸರ್ಕಾರವೂ ಈಗ 21ನೇ ಶತಮಾನದ ನಾಲೆಜ್ ಎಕಾನಮಿ ಹಬ್ ಆಗಿ ಭಾರತವನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ಹೊಸ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಸಂಘಟಿತ ಹೊಣೆಗಾರಿಕೆಯಾಗಿದೆ. ಹೆಚ್ಚು ಹೆಚ್ಚು ಪಾಲಕರು, ವಿದ್ಯಾರ್ಥಿಗಳು ಇದರಲ್ಲಿ ಕೈ ಜೋಡಿಸಿಕೊಂಡಷ್ಟು ಯಶಸ್ಸು ಸುಲಭ ಸಾಧ್ಯವಾಗಲಿದೆ ಎಂದು ಹೇಳಿದರು.