ಬೆಂಗಳೂರು,ಸೆ.7(DaijiworldNews/HR): ಡ್ರಗ್ ಜಾಲ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಯಾವುದೇ ಪ್ರಭಾವ ಇಲ್ಲವೇ ಒತ್ತಡಗಳಿಗೆ ಮಣಿಯುವ ಪ್ರಶ್ನೆಯೇ ಇಲ್ಲ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಹೇಳಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕೆಂದು ಪೊಲೀಸರಿಗೆ ಸೂಚನೆ ನೀಡಲಾಗಿದ್ದು, ಇದರ ಜಾಲವನ್ನು ಪೊಲೀಸರು ಬೇಧಿಸುತ್ತಿದ್ದಾರೆ. ದಿನಕ್ಕೊಂದು ಹೊಸ ಹೊಸ ಸಾಕ್ಷಿಗಳು ಸಿಗುತ್ತಿವೆ ಎಂದರು.
ಇನ್ನು ಡ್ರಗ್ ದಂಧೆ ಪ್ರಕರಣದಲ್ಲಿ ಸರ್ಕಾರ ಯಾವುದೇ ಒತ್ತಡಕ್ಕೂ ಮಣಿಯುವುದಿಲ್ಲ. ಈಗಾಗಲೇ ತನಿಖೆ ಕೂಡ ಬಿರುಸುಗೊಂಡಿದ್ದು ಹಲವಾರು ಮಾಹಿತಿಗಳು ಲಭ್ಯವಾಗಿವೆ. ತನಿಖಾ ದೃಷ್ಟಿಯಿಂದ ಮಾಧ್ಯಮಗಳ ಮುಂದೆ ಇದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಬೆಂಗಳೂರು ಸೇರಿದಂತೆ ಕರ್ನಾಟಕಕ್ಕೆ ಹೊರ ರಾಜ್ಯಗಳಿಂದ ಮಾದಕ ವಸ್ತುಗಳು ಪೂರೈಕೆಯಾಗುತ್ತಿರುವುದು ಕಂಡುಬಂದಿದೆ ಎಂದು ತಿಳಿಸಿದರು.
ಹೀಗಾಗಿ ಗಡಿಭಾಗದ ಜಿಲ್ಲೆಗಳಲ್ಲಿನ ಜಿಲ್ಲಾಧಿಕಾರಿಗಳು ಹಾಗೂ ಪೋಲೀಸ್ ಅಧೀಕ್ಷಕರಿಗೆ ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದ್ದು, ಗಡಿಭಾಗದಲ್ಲಿರುವ ಚೆಕ್ಪೋಸ್ಟ್ಗಳು, ಹೆದ್ದಾರಿಗಳಲ್ಲಿ ತಪಾಸಣೆ ಬಿಗಿಗೊಳಿಸಲಾಗುವುದು. ಈಗಾಗಲೇ ಪೊಲೀಸ್ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಬಗ್ಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.