ಡೆಹ್ರಾಡೂನ್, ಸೆ.7(DaijiworldNews/HR): ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್ ಸಿಂಗ್ ನೇಗಿ ವಿರುದ್ಧ ಅತ್ಯಾಚಾರ ಆರೋಪದ ಮೇಲೆ ಎಫ್ಐಆರ್ ದಾಖಲಿಸಲಾಗಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಉತ್ತರಾಖಂಡದ ಬಿಜೆಪಿ ಶಾಸಕ ಮಹೇಶ್ ನೇಗಿ ವಿರುದ್ಧ ಅತ್ಯಾಚಾರ ಮತ್ತು ಅವರ ಪತ್ನಿ ರಿತಾ ನೇಗಿಯ ವಿರುದ್ಧ ಬೆದರಿಕೆ ಆರೋಪದಡಿ ನೆಹರೂ ಕಾಲೋನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಡೆಹ್ರಾಡೂನ್ ವರಿಷ್ಠಾಧಿಕಾರಿ ಶ್ವೇತ ಚೌಬೆ ಅವರು ತಿಳಿಸಿದ್ದಾರೆ.
ಮಹಿಳೆಯೊಬ್ಬರು ಆ.16 ರಂದು ದೂರು ದಾಖಲಿಸಿದ್ದರು. ದೂರಿನಲ್ಲಿ 'ಶಾಸಕ ಮಹೇಶ್ ನೇಗಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾರೆ. ಶಾಸಕರೇ ನನ್ನ ಮಗಳ ತಂದೆ. ಬೇಕಾದ್ದಲ್ಲಿ ಡಿಎನ್ಎ ಪರೀಕ್ಷೆಗೂ ತಾನು ಸಿದ್ಧ' ಎಂದು ಮಹಿಳೆ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದರು.
ಇನ್ನು ಈ ಆರೋಪವನ್ನು ತಳ್ಳಿ ಹಾಕಿರುವ ಮಹೇಶ್ ನೇಗಿ, 'ಇದು ನನ್ನ ಹೆಸರಿಗೆ ಕಳಂಕ ತರಲು ನಡೆದಿರುವ ಪಿತೂರಿಯಾಗಿದ್ದು, ಇದು ಕಾಂಗ್ರೆಸ್ ನಾಯಕರ ಕೈವಾಡವಾಗಿದ್ದು, ನಾನು ಯಾವುದೇ ತನಿಖೆಯನ್ನು ಎದುರಿಸಲು ಸಿದ್ಧನಿದ್ದೇನೆ' ಎಂದು ಹೇಳಿದ್ದಾರೆ.