ಬೆಂಗಳೂರು, ಸೆ.7(DaijiworldNews/HR): ನಟಿ ಸಂಯುಕ್ತಾ ಹೆಗಡೆ ಮತ್ತು ಸ್ನೇಹಿತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಕ್ತಾರೆ ಕವಿತಾ ರೆಡ್ಡಿ ಬಹಿರಂಗವಾಗಿ ಕ್ಷಮೆ ಕೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕವಿತಾ ರೆಡ್ಡಿಯನ್ನು ಬಂಧಿಸುವಂತೆ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದರು. ಹಿರಿಯ ನಟ ಜಗ್ಗೇಶ್, ನಟಿ ರಮ್ಯಾ, ನಿರ್ದೇಶಕರಾದ ಸಿಂಪಲ್ ಸುನಿ, ಸಂತೋಷ್ ಆನಂದ್ ರಾಮ್, ನಟಿ ಪಾರುಲ್ ಯಾದವ್ ಮತ್ತು ಮೇಘನಾ ಗಾಂವ್ಕರ್ ಸೇರಿದ್ದಂತೆ ಕಲಾವಿದರು ಮತ್ತು ರಾಜಕಾರಣಿಗಳು ಸಂಯುಕ್ತಾ ಬೆಂಬಲಕ್ಕೆ ನಿಂತಿದ್ದರು.
ಇದೀಗ ಕವಿತಾ ರೆಡ್ಡಿಗೆ ಮಾಡಿದ ತಪ್ಪಿನ ಅರಿವಾಗಿ ಕ್ಷಮೆ ಕೇಳಿ, ವಿಡಿಯೋವನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
"ನಾನು ಯಾವಾಗಲು ನೈತಿಕ ಪೊಲೀಸ್ ಗಿರಿಯನ್ನು ವಿರೋಧಿಸುತ್ತೇನೆ. ಮೊನ್ನೆ ನಡೆದ ಘಟನೆ ಬಗ್ಗೆ ಅರಿವಾಗಿದೆ. ನಾನು ಆಕ್ರಮಣಕಾರಿಯಾಗಿ ಪ್ರತಿಕ್ರಿಯಿಸಿದೆ. ಅದು ತಪ್ಪು ಎಂದು ಗೊತ್ತಾಗಿದೆ. ಜವಾಬ್ದಾರಿಯುತ ನಾಗರಿಕಳಾಗಿ ಮತ್ತು ಪ್ರಗತಿಪರ ಮಹಿಳೆಯಾಗಿ ನಾನು ಪ್ರಾಮಾಣಿಕವಾಗಿ ಸಂಯುಕ್ತಾ ಹೆಗಡೆ ಮತ್ತು ಅವರ ಸ್ನೇಹಿತರಲ್ಲಿ ಕ್ಷಮೆಯಾಚಿಸುತ್ತೇನೆ." ಎಂದು ಹೇಳಿದ್ದಾರೆ.
"ಕವಿತಾ ರೆಡ್ಡಿ ಕ್ಷಮೆಯನ್ನು ಸ್ವೀಕರಿಸಿದ್ದೇನೆ. ಎಲ್ಲರೂ ಈ ಘಟನೆಯಿಂದ ಮುಂದುವರೆಯೋಣ. ಮಹಿಳೆಯರಿಗೆ ಸುರಕ್ಷಿತ ಭಾವನೆ ಮೂಡಿಸಬಹುದು ಎಂದು ನಾನು ಭಾವಿಸುತ್ತೇನೆ." ಎಂದು ನಟಿ ಸಂಯುಕ್ತಾ ಕ್ಷಮೆ ಸ್ವೀಕರಿಸಿ ಟ್ವೀಟ್ ಮಾಡಿದ್ದಾರೆ.