ಬೆಂಗಳೂರು. ಸೆ.7(DaijiworldNews/HR): ಕೊರೊನಾ ಸೋಂಕಿನಿಂದ ಗುಣಮುಖರಾದವರಲ್ಲಿ ಮತ್ತೊಮ್ಮೆ ಸೋಂಕು ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಅಧ್ಯಯನ ನಡೆಸಿ ವರದಿ ನೀಡುವಂತೆ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೂಚನೆ ನೀಡಿದ್ದಾರೆ.
ಈ ಬಗ್ಗೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಫೋರ್ಟಿಸ್ ಆಸ್ಪತ್ರೆಯಲ್ಲಿ ಕೊರೊನಾದಿಂದ ಗುಣಮುಖರಾಗಿದ್ದ 27 ವರ್ಷದ ಮಹಿಳೆಗೆ ಮತ್ತೊಮ್ಮೆ ಸೋಂಕು ಕಾಣಿಸಿಕೊಂಡಿರುವ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಬೇರೆ ರಾಷ್ಟ್ರಗಳಲ್ಲೂ ಈ ರೀತಿಯ ಪ್ರಕರಣಗಳು ಕಂಡುಬಂದಿದ್ದು, ಇದಕ್ಕೆ ಒಂದೊಂದು ದೇಶದಲ್ಲೂ ಒಂದೊಂದು ರೀತಿ ಕಾರಣ ಕೇಳಿಬಂದಿವೆ. ನಮ್ಮಲ್ಲೂ ಇಂಥ ಪ್ರಕರಣ ಕಾಣಿಸಿಕೊಂಡಿರುವುದು ಆತಂಕದ ವಿಷಯ. ಇದನ್ನು ಸೂಕ್ಷ್ಮರೀತಿಯಲ್ಲಿ ನಿರ್ವಹಿಸುವ ಮೂಲಕ ಜನರಲ್ಲಿ ಮತ್ತೊಮ್ಮೆ ಕೊರೊನಾ ಬಾಧಿಸುತ್ತದೆ ಎಂಬ ಆತಂಕ ದೂರ ಮಾಡಬೇಕು' ಎಂದರು.
ಕೊರೊನಾದಿಂದ ಗುಣಮುಖರಾದವರ ದೇಹದಲ್ಲಿ ಬಿಳಿರಕ್ತ ಕಣಗಳ ಮರು ಉತ್ಪಾದನೆಗೆ ಕನಿಷ್ಠ 15 ದಿನಗಳ ಸಮಯ ತೆಗೆದುಕೊಳ್ಳುತ್ತದೆ. ಇದರಿಂದ ಕೆಲವರಿಗೆ ಸೋಂಕು ಮತ್ತೊಮ್ಮೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಆದರೆ, ಇದೇ ಕಾರಣ ಎಂದು ಸ್ಪಷ್ಟವಾಗಿ ಹೇಳಲಾಗದು' ಎಂದು ಸಭೆಯಲ್ಲಿದ್ದ ತಜ್ಞರು ತಿಳಿಸಿದ್ದಾರೆ.
ಕೊರೊನಾದಿಂದ ಗುಣಮುಖರಾದವರ ಮೇಲೆ ಯಾವ ರೀತಿ ನಿಗಾ ವಹಿಸಲಾಗುತ್ತಿದೆ. ಅವರು ಅನುಸರಿಸಬೇಕಾದ ಎಚ್ಚರಿಕೆ ಹಾಗೂ ಇತರೆ ಕ್ರಮಗಳ ಬಗ್ಗೆ ಯಾವ ರೀತಿ ಅರಿವು ಮೂಡಿಸಲಾಗಿದೆ ಎಂಬ ವಿಷಯಗಳ ಬಗ್ಗೆಯೂ ಅಧಿಕಾರಿಗಳಿಂದ ಸಚಿವ ಸುಧಾಕರ್ ಮಾಹಿತಿ ಪಡೆದಿದ್ದಾರೆ.