ಹೊಸದಿಲ್ಲಿ, ಸೆ.7(DaijiworldNews/HR): ನಕಲಿ ಟ್ವೀಟ್ ಗಳನ್ನು ಉಪಯೋಗಿಸಿ ತಮ್ಮ ವಿರುದ್ಧ ಅಭಿಯಾನವನ್ನು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ನಡೆಸುತ್ತಿದ್ದಾರೆಂದು ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಆದರೆ ತಮ್ಮ ಬಗ್ಗೆ ಯಾವ ವಿಚಾರಗಳನ್ನು ಮುಂದಿಟ್ಟುಕೊಂಡು ಅಪಪ್ರಚಾರ ನಡೆಯುತ್ತಿದೆ ಎಂಬ ವಿಚಾರವನ್ನು ಮಾತ್ರ ಅವರು ಬಹಿರಂಗಪಡಿಸಿಲ್ಲ.
ಈ ಬಗ್ಗೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ 'ಬಿಜೆಪಿ ಐಟಿ ಘಟಕದ ಕೆಲ ಸದಸ್ಯರು ನಕಲಿ ಐಡಿ ಟ್ವೀಟ್ ಗಳನ್ನು ಬಳಸಿ ನನ್ನ ಮೇಲೆ ವೈಯಕ್ತಿಕ ದಾಳಿಗಳನ್ನು ನಡೆಸುತ್ತಿದ್ದಾರೆ. ಐಟಿ ಘಟಕದ ಕಾರ್ಯಗಳಿಗೆ ಬಿಜೆಪಿಯನ್ನು ಹೊಣೆಯಾಗಿಸಲು ಸಾಧ್ಯವಾಗದಂತೆ ನನ್ನ ಫಾಲೋವರ್ಸ್ ಏನಾದರೂ ಟ್ವೀಟ್ ಗಳನ್ನು ಮಾಡಿದರೆ ಅದಕ್ಕೆ ನಾನು ಜವಾಬ್ದಾರನಲ್ಲ ಎಂದಿದ್ದಾರೆ.
ಇನ್ನು ಈ ಟ್ವೀಟ್ ದಾಳಿಗಳನ್ನು ನಿರ್ಲಕ್ಷ್ಯಿಸುವಂತೆ ಟ್ವೀಟ್ಟರಿಗರೊಬ್ಬರು ನೀಡಿದ ಸಲಹೆಗೆ ಪ್ರತಿಕ್ರಿಯಿಸಿದ ಸ್ವಾಮಿ, 'ಬಿಜೆಪಿ ತನ್ನ ಐಟಿ ಸೆಲ್ ಸದಸ್ಯರನ್ನು ಉಚ್ಛಾಟಿಸಬೇಕು., ನಾನು ಆ ಟ್ವೀಟ್ ಗಳನ್ನು ನಿರ್ಲಕ್ಷ್ಯಿಸುತ್ತೇನೆ, ಆದರೆ ಬಿಜೆಪಿ ಅವರನ್ನು ಕಿತ್ತೊಗೆಯಬೇಕು, ನಾವು ಮರ್ಯಾದ ಪುರುಷೋತ್ತಮರ ಪಕ್ಷ, ರಾವಣ ಅಥವಾ ದುಷ್ಯಾಸನರ ಪಕ್ಷವಲ್ಲ'' ಎಂದು ಹೇಳಿದ್ದಾರೆ.