ನವದೆಹಲಿ, ಸೆ 08 (DaijiworldNews/PY): ಭಾರತ ಹಾಗೂ ಚೀನಾ ನಡುವಿನ ವಿವಾದ ಗಡಿಯುದ್ದಕ್ಕೂ ಉದ್ವಿಗ್ನತೆ ಉಲ್ಬಣಗೊಂಡಿದ್ದು, ಉಭಯ ರಾಷ್ಟ್ರಗಳ ನಡುವೆ ಸೋಮವಾರ ರಾತ್ರಿ ಪೂರ್ವ ಲಡಾಖ್ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಗುಂಡಿನ ಚಕಮಕಿ ನಡೆದಿದೆ.
ಪಾಂಗಾಂಗ್ ಸರೋವರದ ದಕ್ಷಿಣ ದಂಡೆಯಲ್ಲಿ ಭಾರತೀಯ ಸೇನಾ ಸಿಬ್ಬಂದಿಗಳು ನೀಡಿದ ಎಚ್ಚರಿಕಾ ದಾಳಿಯ ಪ್ರತಿಯಾಗಿ ಈ ಕ್ರಮ ತೆಗದುಕೊಳ್ಳಬೇಕಾಯಿತು ಎಂದು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ ಹೇಳಿದೆ.
ಘಟನೆಯ ಬಗ್ಗೆ ನವದೆಹಲಿಯ ಮೂಲವೊಂದು ದೃಢಪಡಿಸಿದೆ. ಆದರೆ, ಈ ಬಗ್ಗೆ ಹೆಚ್ಚಿನ ಯಾವುದೇ ಮಾಹಿತಿ ನೀಡಿಲ್ಲ. ಭಾರತೀಯ ಸೇನೆ ಅಥವಾ ಚೀನಾ ಸೇನೆಗಳಲ್ಲಿ ಸಾವು-ನೋವುಗಳು ಸಂಭವಿಸಿದೆಯೇ ಎನ್ನುವ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ.
ಈ ಬಗ್ಗೆ ಪಿಎಲ್ಎಯ ಪಶ್ಚಿಮ ಕಮಾಂಡ್ನ ಹಿರಿಯ ಕರ್ನಲ್ ಝಾಂಗ್ ಸುಯಿಲಿ ಅವರು ಸೋಮವಾರ ರಾತ್ರಿ ಹೇಳಿಕೆ ನೀಡಿದ್ದು, ಭಾರತೀಯ ಸೇನೆಯು ಪಾಂಗೊಂಗ್ ಸರೋವರದ ದಕ್ಷಿಣದ ದಂಡೆಯಲ್ಲಿರುವ ವಾಸ್ತವ ನಿಯಂತ್ರಣ ರೇಖೆಯನ್ನು ಅಕ್ರಮವಾಗಿ ಉಲ್ಲಂಘನೆ ಮಾಡಿದೆ ಎಂದು ಹೇಳಿದ್ದಾರೆ.
ಮೇ ತಿಂಗಳ ಬಳಿಕ ಉಭಯ ರಾಷ್ಟ್ರಗಳ ಸೇನೆಯ ನಡುವೆ ನಡೆಯುತ್ತಿರುವ ಎರಡನೇ ಸಂಘರ್ಷ ಇದಾಗಿದೆ. ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಜೂನ್ 15ರಂದು ನಡೆದ ಸಂಘರ್ಷದಲ್ಲಿ ಸುಮಾರು 21 ಯೋಧರು ಹುತಾತ್ಮರಾಗಿದ್ದರು. ಚೀನಾ ಕಡೆಯಲ್ಲಿಯೂ ಸಾವು-ನೋವುಗಳಾಗಿದ್ದು, ಈ ಬಗ್ಗೆ ಚೀನಾ ವಿವರ ನೀಡಿಲ್ಲ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಚೀನಾದ ರಕ್ಷಣಾ ಸಚಿವ ವೀ ಫೆಂಗೆ ಅವರ ನಡುವೆ ಮಾತುಕತೆಯಾದ ಮೂರೇ ದಿನದಲ್ಲಿ ಗುಂಡಿನ ಚಕಮಕಿ ನಡೆದಿದೆ. ವಾರಾಂತ್ಯದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿಯೊಂದಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.