ಬೆಂಗಳೂರು, ಸೆ. 8(DaijiworldNews/HR): ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಈ ವರ್ಷ ಸುರಿದ ಮಳೆ ಮತ್ತು ಪ್ರವಾಹದಿಂದ 8,071 ಕೋಟಿ ನಷ್ಟ ಉಂಟಾಗಿದ್ದು ಪರಿಹಾರ ನೀಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಪ್ರವಾಹ ಮತ್ತು ಅತಿವೃಷ್ಟಿಯಿಂದ ಆಗಿರುವ ಹಾನಿ ಕುರಿತು ಅಧ್ಯಯನ ನಡೆಸಲು ರಾಜ್ಯಕ್ಕೆ ಬಂದಿರುವ ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಕೆ.ವಿ. ಪ್ರತಾಪ್ ನೇತೃತ್ವದ ಅಧ್ಯಯನ ತಂಡದ ಜೊತೆಗೆ ಗೃಹ ಕಚೇರಿ 'ಕೃಷ್ಣಾ'ದಲ್ಲಿ ಸೋಮವಾರ ಸಭೆ ನಡೆಸಿ ಹಾನಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯುಳ್ಳ ದಾಖಲೆ ಸಲ್ಲಿಸಿದ್ದಾರೆ.
ಈ ವರ್ಷ ಪ್ರವಾಹದಿಂದ 4.03 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆ ಹಾನಿಯಾಗಿದ್ದು, ರಸ್ತೆ, ಸೇತುವೆ, ವಿದ್ಯುತ್ ಪರಿವರ್ತಕಗಳು, ಶಾಲೆ, ಅಂಗನವಾಡಿ ಮತ್ತು ಸರ್ಕಾರಿ ಕಟ್ಟಡಗಳಿಗೂ ಹಾನಿಯಾಗಿದೆ. 8,071 ಕೋಟಿಯಷ್ಟು ನಷ್ಟ ಉಂಟಾಗಿ ರುವ ಅಂದಾಜು ಇದೆ ಎಂದು ಯಡಿಯೂರಪ್ಪ ಕೇಂದ್ರ ತಂಡಕ್ಕೆ ವಿವರಿಸಿದ್ದಾರೆ.
ಪ್ರವಾಹ, ಭೂಕುಸಿತ ಮತ್ತು ಅತಿವೃಷ್ಟಿಯಿಂದ ಸಂಪೂರ್ಣ ಹಾನಿಗೀಡಾದ ಮನೆಗಳಿಗೆ ತಲಾ 5 ಲಕ್ಷ, ತೀವ್ರ ಹಾನಿಗೀಡಾದ ಮನೆಗಳಿಗೆ ತಲಾ 3 ಲಕ್ಷ ಮತ್ತು ಭಾಗಶಃ ಹಾನಿಗೀಡಾದ ಮನೆಗಳಿಗೆ ತಲಾ 50 ಸಾವಿರ ಪರಿಹಾರ ನೀಡಲಾಗುತ್ತಿದೆ. ಕಳೆದ ವರ್ಷ ಈ ಉದ್ದೇಶಕ್ಕೆ 1,500 ಕೋಟಿ ಒದಗಿಸಲಾಗಿದೆ. ಈ ವರ್ಷ ಕೋವಿಡ್ ಸಂಕಷ್ಟದ ನಡುವೆಯೂ 200 ಕೋಟಿ ನೀಡಲಾಗುವುದು ಎಂದರು.
ಕೊರೊನಾದಿಂದಾಗಿ ವಿಕೋಪ ನಿರ್ವಹಣೆಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ನೆರವು ಪಡೆಯಲು ಈವರೆಗೆ ಸಾಧ್ಯವಾಗಿಲ್ಲ. ಕೋವಿಡ್ ನಿಯಂತ್ರಣಕ್ಕಾಗಿ 460 ಕೋಟಿ ವೆಚ್ಚ ಮಾಡಲಾಗಿದ್ದು, ಕೊರೊನಾ ನಿಯಂತ್ರಣ ಹಾಗೂ ಪ್ರವಾಹ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಸರ್ಕಾರ ಹೆಚ್ಚಿನ ನೆರವು ಒದಗಿಸಬೇಕು ಎಂದು ಮನವಿ ಮಾಡಿದ್ದಾರೆ.