ದಾವಣಗೆರೆ, ಸೆ. 8(DaijiworldNews/HR): ಬಳ್ಳಾರಿ ಜಿಲ್ಲಾ ಆರ್ ಸಿಎಚ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ.ಎಂ.ಎಚ್.ರವೀಂದ್ರನಾಥ್ ಹಿರಿಯ ಐಎಎಸ್ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಕಳೆದ ನಾಲ್ಕು ದಿನಗಳಿಂದ ದಾವಣಗೆರೆಯಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದಾರೆ.
ಡಾ. ರವೀಂದ್ರನಾಥ್ ಅವರು ಎನ್ಎಂಎಚ್ ಯೋಜನೆಯಡಿ ಇ- ಟೆಂಡರ್ ಪ್ರಕ್ರಿಯೆಯಲ್ಲಿ ತಪ್ಪು ಮಾಡಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಪಂಚಾಯತ್ ನ ಹಿಂದಿನ ಸಿಇಒ ನಿತಿನ್ ಅಮಾನತುಗೊಳಿಸಿದ್ದರು. ಅಮಾನತು ಆದೇಶ ಪ್ರಶ್ನಿಸಿ ಡಾ. ರವೀಂದ್ರನಾಥ್ ಕೆಎಟಿ ಮೊರೆ ಹೋಗಿದ್ದರು. ಡಾ.ರವೀಂದ್ರನಾಥ್ ತಪ್ಪು ವೆಸಗಿಲ್ಲ ಎಂದು ಕೆಎಟಿ ಆದೇಶ ನೀಡಿತ್ತು. ಆ ಬಳಿಕ ಡಾ. ರವೀಂದ್ರನಾಥ್ ಅವರನ್ನು ಸೇಡಂ ತಾಲೂಕು ಆಸ್ಪತ್ರೆಗೆ ಹಿರಿಯ ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದ ತಮ್ಮನ್ನು ತಾಲ್ಲೂಕು ಅಧಿಕಾರಿಯಾಗಿ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಮತ್ತೆ ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಜಿಲ್ಲಾ ಮಟ್ಟದ ಅಧಿಕಾರಿ ಹುದ್ದೆ ನೀಡುವಂತೆ ಡಾ. ರವೀಂದ್ರನಾಥ್ ಪರ ಆದೇಶ ನೀಡಿತ್ತು. ಆದರೂ ಈವರೆಗೆ ಆದೇಶ ಪಾಲನೆ ಆಗಿಲ್ಲ. ಹಣ ನೀಡಿದರೆ ಮಾತ್ರವೇ ಹುದ್ದೆ ನೀಡಲಾಗುತ್ತದೆ ಎಂದು ಕೆಲ ಅಧಿಕಾರಿಗಳು ನೇರವಾಗಿ ಹೇಳಿದ್ದಾರೆ ಎಂದು ಆರೋಪಿಸುವ ರವೀಂದ್ರನಾಥ್ ಜೀವನ ನಿರ್ವಹಣೆಗಾಗಿ ದಾವಣಗೆರೆಯಲ್ಲಿ ಆಟೋ ರಿಕ್ಷಾ ಓಡಿಸುತ್ತಿರುವುದಾಗಿ ಹೇಳಿದ್ದಾರೆ.
ಜನರಿಗೆ ಸರ್ಕಾರಿ ವ್ಯವಸ್ಥೆಯಲ್ಲಿನ ಲೋಪದೋಷಗಳನ್ನು ತಿಳಿಸುವ ಜೊತೆಗೆ ಏನಾದರೂ ಮಾಡಿಯೂ ಜೀವನ ನಡೆಸಬಹುದು ಎಂದು ಸಮಾಜಕ್ಕೆ ಸಂದೇಶ ನೀಡುವ ಉದ್ದೇಶದಿಂದ ಆಟೋರಿಕ್ಷಾ ಚಾಲಕನಾಗಿ ದುಡಿಯುತ್ತಿರುವುದಾಗಿ ರವೀಂದ್ರನಾಥ್ ಹೇಳುತ್ತಾರೆ.