ನವದೆಹಲಿ, ಸೆ. 08 (DaijiworldNews/MB) : ''ನೈಜ ನಿಯಂತ್ರಣ ರೇಖೆ (ಎಲ್ಎಸಿ) ದಾಟಿ ನಾವು ಹೋಗಿಲ್ಲ, ಚೀನಾವೇ ಮೊದಲು ಗುಂಡು ಹಾರಿಸಿದ್ದು'' ಎಂದು ಭಾರತೀಯ ಸೇನೆ ಮಂಗಳವಾರ ಸ್ಪಷ್ಟಪಡಿಸಿದೆ.
ಸಾಂದರ್ಭಿಕ ಚಿತ್ರ
ಸೋಮವಾರ ರಾತ್ರಿ ಭಾರತ–ಚೀನಾ ಸೇನಾಪಡೆಗಳ ನಡುವೆ ಪೂರ್ವ ಲಡಾಖ್ನ ಪಾಂಗಾಂಗ್ ಸರೋವರದ ದಕ್ಷಿಣ ದಂಡೆ ಬಳಿ ಗುಂಡಿನ ಚಕಮಕಿ ನಡೆದಿದೆ ಎಂದು ವರದಿಯಾಗಿದ್ದು ''ಭಾರತ ಸೇನೆ ನಡೆಸಿದ ಎಚ್ಚರಿಕೆ ದಾಳಿ (ವಾರ್ನಿಂಗ್ ಶಾಟ್)ಗೆ ಪ್ರತಿಯಾಗಿ ನಾವು ದಾಳಿ ನಡೆಸಿದ್ದೇವೆ'' ಎಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್ಎ) ಹೇಳಿತ್ತು.
ಇದೀಗ ಚೀನಾದ ಈ ಆರೋಪವನ್ನು ನಿರಾಕರಿಸಿರುವ ಭಾರತ ಸೇನೆಯು, ''ಚೀನಾ ಪಡೆಗಳು ಸೋಮವಾರ ರಾತ್ರಿ ಎಲ್ಎಸಿಯನ್ನು ದಾಟಿ ಬರಲು ಯತ್ನಿಸಿದೆ. ಇದನ್ನು ಭಾರತ ಸೇನೆ ತಡೆಯಲು ಯತ್ನಿಸಿದ ಸಂದರ್ಭದಲ್ಲಿ ನಮಗೆ ಭಯ ಮೂಡಿಸಲು ಚೀನಾ ಗಾಳಿಯಲ್ಲಿ ಗುಂಡು ಹಾರಿಸಿದೆ'' ಎಂದು ಸೇನೆಯ ಪ್ರಕಟಣೆ ತಿಳಿಸಿದೆ.
''ಭಾರತ ಸೇನೆಯು ಎಲ್ಎಸಿಯಲ್ಲಿ ಯಾವುದೇ ಬದಲಾವಣೆಗೆ ಯತ್ನಿಸಿಲ್ಲ ಹಾಗೂ ಗುಂಡಿನ ದಾಳಿ ಅಥವಾ ಯಾವುದೇ ಆಕ್ರಮಣ ಮಾಡಿಲ್ಲ. ಭಾರತವು ಪರಿಸ್ಥಿತಿಯ ಸುಧಾರಣೆಯ ಯತ್ನದಲ್ಲಿದ್ದರೆ, ಚೀನಾವು ಮತ್ತಷ್ಟು ಪ್ರಚೋದನಾಕಾರಿ ಕೃತ್ಯಗಳನ್ನು ನಡೆಸುತ್ತಲ್ಲೇ ಇದೆ'' ಎಂದು ಭಾರತೀಯ ಸೇನೆ ತಿಳಿಸಿದೆ.