ನವದೆಹಲಿ, ಸೆ. 8(DaijiworldNews/HR): ಜೀವ ವಿಮಾ ಕಾರ್ಪೊರೇಷನ್ (ಎಲ್ಐಸಿ) ಶೇ.25ರಷ್ಟು ಷೇರನ್ನು ಮಾರಾಟ ಮಾಡುವ ಕೇಂದ್ರ ಸರ್ಕಾರದ ನಿರ್ಧಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್, ಪ್ರಧಾನಿ ನರೇಂದ್ರ ಮೋದಿ ಸರ್ಕಾರಿ ಕಂಪನಿಗಳನ್ನು ಮಾರಾಟ ಮಾಡುವ ಅಭಿಯಾನ ನಡೆಸುತ್ತಿದ್ದಾರೆ ಎಂಬುದಾಗಿ ಆರೋಪಿಸಿದ್ದಾರೆ.
ಇನ್ನು ನರೇಂದ್ರ ಮೋಡಿಯವರು ಸರ್ಕಾರಿ ಕಂಪನಿಗಳನ್ನು ಮಾರಾಟ ಮಾಡುವ ಅಭಿಯಾನ ನಡೆಸುತ್ತಿದ್ದಾರೆ. ಸ್ವಯಂ ಅಪರಾಧದಿಂದ ಉಂಟಾಗಿರುವ ಆರ್ಥಿಕ ಕುಸಿತವನ್ನು ಮುಚ್ಚಿಹಾಕಲು ಸರ್ಕಾರದ ಆಸ್ತಿಯನ್ನು ಒಂದರ ನಂತರ ಒಂದರಂತೆ ಮಾರಾಟ ಮಾಡಲಾಗುತ್ತಿದೆ. ಜನರ ಭವಿಷ್ಯ ಮತ್ತು ನಂಬಿಕೆಯನ್ನು ಅಪಾಯಕ್ಕೊಡ್ಡಿ ಎಲ್ಐಸಿಯನ್ನು ಮಾರಾಟ ಮಾಡುವುದು ಮೋದಿ ಸರ್ಕಾರದ ಇನ್ನೊಂದು ಅವಮಾನಕರವಾದ ಪ್ರಯತ್ನ ಎಂಬುದಾಗಿ ಟ್ವೀಟ್ ಮಾಡಿದ್ದಾರೆ.