ನವದೆಹಲಿ, ಸೆ. 08 (DaijiworldNews/MB) : ಕೇಂದ್ರ ಸರ್ಕಾರ ರಾಷ್ಟ್ರೀಯ ಸಾಕ್ಷರತಾ ರಾಜ್ಯಗಳ ಪಟ್ಟಿ ಬಿಡುಗಡೆ ಮಾಡಿದ್ದು, ಕೇರಳ ಮತ್ತೆ ಅಗ್ರಸ್ಥಾನ ತನ್ನದಾಗಿಸಿಕೊಂಡಿದ್ದು ಆಂಧ್ರ ಪ್ರದೇಶ ಕೊನೆಯ ಸ್ಥಾನಕ್ಕೆ ಇಳಿದಿದೆ. ಕರ್ನಾಟಕ 15 ನೇ ಸ್ಥಾನದಲ್ಲಿದೆ.
ರಾಷ್ಟ್ರೀಯ ಅಂಕಿಅಂಶ ಕಚೇರಿ (ಎನ್ಎಸ್ಒ) ಸಮೀಕ್ಷೆಯ ಪ್ರಕಾರವಾಗಿ ರಾಜ್ಯಾವಾರು ಪಟ್ಟಿಯಲ್ಲಿ ಕೇರಳ ಮತ್ತೊಮ್ಮೆ ಅಗ್ರಸ್ಥಾನದಲ್ಲಿದ್ದು, ಕೇರಳದಲ್ಲಿ ಸಾಕ್ಷರತೆ ಪ್ರಮಾಣ ಶೇ.96.2 ರಷ್ಟಿದೆ. ಕೊನೆಯ ಸ್ಥಾನದಲ್ಲಿರುವ ಆಂಧ್ರಪ್ರದೇಶ ಶೇ.66.4 ಸಾಕ್ಷರತೆ ಇದ್ದು 15 ನೇ ಸ್ಥಾನದಲ್ಲಿರುವ ಕರ್ನಾಟಕದಲ್ಲಿ ಶೇ. 77.2ರಷ್ಟು ಸಾಕ್ಷರತೆಯಿದೆ.
ಇನ್ನು ದ್ವಿತೀಯ ಸ್ಥಾನದಲ್ಲರುವ ದೆಹಲಿಯಲ್ಲಿ ಶೇಕಡಾ 88.7 ರಷ್ಟು ಸಾಕ್ಷರತೆ ಹೊಂದಿದ್ದು ಉತ್ತರಾಖಂಡ ರಾಜ್ಯ ಶೇ .87.6 ರೊಂದಿಗೆ ಮೂರನೇ ಸ್ಥಾನದಲ್ಲಿದೆ. ರಾಜಸ್ಥಾನವು ಶೇ.69.7 ಪ್ರತಿಶತದಷ್ಟು ಸಾಕ್ಷರತೆಯೊಂದಿಗೆ ಅತ್ಯಂತ ಹಿಂದುಳಿದ ರಾಜ್ಯಗಳಲ್ಲಿ ಎರಡನೇ ಸ್ಥಾನದಲ್ಲಿದೆ.
ಸಮೀಕ್ಷೆಯ ಪ್ರಕಾರ ದೇಶದ ಸಾಕ್ಷರತಾ ಪ್ರಮಾಣ ಶೇಕಡಾ 77.7 ಆಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಸಾಕ್ಷರತೆಯ ಪ್ರಮಾಣ ಶೇ. 73.5 ರಷ್ಟಿದ್ದರೆ, ನಗರ ಪ್ರದೇಶಗಳಲ್ಲಿ ಶೇ 87.7 ರಷ್ಟಿದೆ. ರಾಷ್ಟ್ರಮಟ್ಟದಲ್ಲಿ ಪುರುಷರ ಸಾಕ್ಷರತೆಯ ಪ್ರಮಾಣ 84.7 ರಷ್ಟಿದ್ದರೆ, ಮಹಿಳೆಯರ ಪ್ರಮಾಣ 70.3 ರಷ್ಟಿದೆ. ಆದರೆ ಸಮೀಕ್ಷೆಯ ಪ್ರಕಾರ ಎಲ್ಲಾ ರಾಜ್ಯಗಳಲ್ಲಿ ಮಹಿಳೆಯರಿಗಿಂತ ಪುರುಷರ ಸಾಕ್ಷರತೆ ಪ್ರಮಾಣವೇ ಅಧಿಕವಾಗಿದೆ.
ಅಗ್ರಸ್ಥಾನದಲ್ಲಿರುವ ಕೇರಳದಲ್ಲಿ ಪುರುಷರ ಸಾಕ್ಷರತೆ ಪ್ರಮಾಣ ಶೇ. 97.4 ರಷ್ಟಿದ್ದರೆ, ಮಹಿಳೆಯರ ಸಾಕ್ಷರತೆ ಪ್ರಮಾಣ ಶೇ 95.2 ರಷ್ಟಿದೆ. ದ್ವಿತೀಯ ಸ್ಥಾನದಲ್ಲಿರುವ ದೆಹಲಿಯಲ್ಲಿ ಪುರುಷರ ಸಾಕ್ಷರತೆ ಪ್ರಮಾಣ 93.7 ರಷ್ಟಿದ್ದು, ಮಹಿಳೆಯರ ಸಾಕ್ಷರತಾ ಪ್ರಮಾಣ ಶೇ. 82.4 ರಷ್ಟಿದೆ.