ಬೆಂಗಳೂರು,ಸೆ. 8(DaijiworldNews/HR): ಡ್ರಗ್ಸ್ ದಂಧೆ ಪ್ರಕರಣ ಕನ್ನಡ ಚಿತ್ರರಂಗಕ್ಕೆ ಕೆಟ್ಟ ಹೆಸರು ತರುತ್ತಿದೆ ಎಂದು ಆರೋಗ್ಯ ಸಚಿವ ರಾಮುಲು ಹೇಳಿದ್ದಾರೆ.
ಈ ಬಗ್ಗೆ ವಿಧಾನಸೌಧದ ಡಾ. ಬಿ ಆರ್ ಅಂಬೇಡ್ಕರ್ ಮೇಟ್ರೋ ರೈಲು ನಿಲ್ದಾಣಕ್ಕೆ ಭೇಟಿ ವೇಳೆ ಮಾತನಾಡಿದ ಅವರು, ರಾಜಕೀಯ ರಂಗ, ರಾಜಕಾರಣಿಗಳ ಮಕ್ಕಳು, ಚಿತ್ರನಟರು ಯಾರೇ ಈ ಡ್ರಗ್ಸ್ ಮಾಫಿಯಾದಲ್ಲಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಮಾಫಿಯಾದಿಂದ ಯುವ ಜನತೆಯನ್ನು ಕಾಪಾಡಬೇಕಿದೆ. ನಮ್ಮ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತದೆ ಎಂದು ತಿಳಿಸಿದರು.
ಇನ್ನು ನಿನ್ನೆಯಿಂದಲೇ ಮೇಟ್ರೋ ರೈಲು ಸಂಚಾರ ಆರಂಭವಾಗಿದ್ದು, ಈ ಹಿನ್ನಲೆಯಲ್ಲಿ ಮೇಟ್ರೋ ಕೋವಿಡ್ ವಿಚಾರವಾಗಿ ಯಾವ ರೀತಿ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿದರು. ನಿಲ್ದಾಣದಲ್ಲೂ ಕೈಗೊಂಡ ಮುಂಜಾಗ್ರತಾ ಕ್ರಮಗಳ ಬಗ್ಗೆ ಅಧಿಕಾರಿಗಳಿಂದ ರಾಮುಲು ಮಾಹಿತಿ ಪಡೆದರು. ಪ್ರಯಾಣಿಕರು ಆತಂಕಪಡುವ ಅಗತ್ಯ ಇಲ್ಲ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮೆಟ್ರೋ ರೈಲಿನಲ್ಲಿಯೂ ಸಾಮಾಜಿಕ ಅಂತರಕ್ಕೆ ಒತ್ತು ನೀಡಲಾಗಿದೆ. ಇದರ ಜೊತೆಗೆ ಥರ್ಮಲ್ ಸ್ಕ್ಯಾನಿಂಗ್, ಸ್ಯಾನಿಟೈಸ್ ಎಲ್ಲದರ ಬಗ್ಗೆಯೂ ಮುಂಜಾಗ್ರತ ಕ್ರಮಗಳನ್ನು ಮೆಟ್ರೋ ಕೈಗೊಂಡಿದೆ. ಪ್ರಯಾಣಿಕರು ಆತಂಕಪಡದೆ ಪ್ರಯಾಣಿಸಬಹುದು ಎಂದರು.
5 ತಿಂಗಳ ಬಳಿಕ ಮೆಟ್ರೋ ರೈಲು ಆರಂಭವಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಪ್ರಯಾಣಿಕರು ಮೆಟ್ರೋದಲ್ಲಿ ಪ್ರಯಾಣಿಸಬೇಕೆಂದು ಮನವಿ ಮಾಡಿದ ಸಚಿವರು, ಆರು ಬೋಗಿಗಳಲ್ಲಿ ಸುಮಾರು 400 ಪ್ರಯಾಣಿಕರು ಪ್ರಯಾಣಿಸಬಹುದು ಎಂಬುದಾಗಿ ತಿಳಿಸಿದ್ದಾರೆ.