ಮುಂಬೈ, ಸೆ. 08 (DaijiworldNews/MB) : ನಟ ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾದಕ ವಸ್ತು ನಂಟು ವಿಚಾರದಲ್ಲಿ ತನಿಖೆ ನಡೆಸುತ್ತಿದ್ದ ಎನ್ಸಿಬಿ ಅಧಿಕಾರಿಗಳು ಸುಶಾಂತ್ ಮಾಜಿ ಪ್ರೇಯಸಿ, ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಿದ್ದಾರೆ.
ಸುಶಾಂತ್ ಸಿಂಗ್ ಸಾವು ಪ್ರಕರಣಕ್ಕೆ ಸಂಬಂಧಿಸಿ ಮಾದಕ ವಸ್ತು ನಂಟು ವಿಚಾರದಲ್ಲಿ ಈಗಾಗಲೇ ರಿಯಾ ಚಕ್ರವರ್ತಿ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ಸಿಂಗ್ ಹೌಸ್ ಮ್ಯಾನೇಜರ್ ಸ್ಯಾಮ್ಯಯೆಲ್ ಮಿರಾಂಡ ಮತ್ತು ಆತನ ಸಿಬ್ಬಂದಿ ದೀಪೇಶ್ ಸಾವಂತ್ರನ್ನು ಎನ್ಸಿಬಿ ಅಧಿಕಾರಿಗಳಯ ಬಂಧಿಸಿದ್ದು ರಿಯಾ ಚಕ್ರವರ್ತಿಗೆ ಇಂದು ಮೂರನೇ ಬಾರಿ ಸಮನ್ಸ್ ನೀಡಿದ್ದರು. ತನಿಖೆಗೆ ಹಾಜರಾದ ರಿಯಾ ಚಕ್ರವರ್ತಿಯನ್ನು ಅಧಿಕಾರಿಗಳು ಬಂಧಿಸಿದ್ದಾರೆ.
ಸಂಜೆ ಐದು ಗಂಟೆಯ ಸುಮಾರಿಗೆ ರಿಯಾಳ ವೈದ್ಯಕೀಯ ಪರೀಕ್ಷೆ ನಡೆಸಲಿದ್ದು ಬುಧವಾರ ರಿಯಾ ಸೇರಿದಂತೆ ನಾಲ್ವರು ಬಂಧಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುತ್ತದೆ ಎಂದು ವರದಿಯಾಗಿದೆ.
ಇನ್ನು ನಟಿ ರಿಯಾ ಚಕ್ರವರ್ತಿನೀಡಿರುವ ದೂರಿನ ಮೇರೆಗೆ ಮುಂಬೈ ಪೊಲೀಸರು ಮಂಗಳವಾರ ಸುಶಾಂತ್ ಸಿಂಗ್ ರಾಜ್ಪೂತ್ ಸಹೋದರಿಯರಾದ ಪ್ರಿಯಾಂಕಾ ಸಿಂಗ್ ಹಾಗೂ ಮೀಟು ಸಿಂಗ್ ಹಾಗೂ ದಿಲ್ಲಿ ಮೂಲದ ರಾಮಮನೋಹರ್ ಲೋಹಿಯಾ ಆಸ್ಪತ್ರೆಯ ವೈದ್ಯನ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಆರೋಪದಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಜೂನ್ 14ರಂದು ಬಾಲಿವುಡ್ ನಟ ಸುಶಾಂತ್ ಸಿಂಗ್ ತನ್ನ ಮುಂಬೈನ ಬಾಂದ್ರಾದಲ್ಲಿರುವ ತನ್ನ ನಿವಾಸದಲ್ಲಿ ಶವವಾಗಿ ಪತ್ತೆಯಾಗದ್ದು ಈ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ತನಿಖೆ ನಡೆಸುತ್ತಿದೆ. ದಿನ ಕಳೆದಂತೆ ಹಲವು ತಿರುವುಗಳನ್ನು ಪಡೆಯುತ್ತಿರುವ ಸುಶಾಂತ್ ಸಿಂಗ್ ಸಾವು ಪ್ರಕರಣದಲ್ಲಿ ಮಾದಕ ವಸ್ತು ನಂಟು ಇರುವುದು ತಿಳಿದು ಬಂದ ಬೆನ್ನಲ್ಲೇ ಎನ್ಸಿಬಿ ಈ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿದೆ.