ಮುಂಬೈ, ಸೆ. 08 (DaijiworldNews/MB) : ಮಹಾರಾಷ್ಟ್ರ ವಿಧಾನಸಭೆಯ ಮಳೆಗಾಲದ ಅಧಿವೇಶನದ ಎರಡನೇ ದಿನವಾದ ಮಂಗಳವಾರ ಉಭಯ ಸದನಗಳಲ್ಲಿ ಶಿವಸೇನೆಯು ರಿಪಬ್ಲಿಕ್ ಟಿವಿಯ ಆಡಳಿತ ನಿರ್ದೇಶಕ ಹಾಗೂ ಪ್ರಧಾನ ಸಂಪಾದಕ ಅರ್ನಬ್ ಗೋಸ್ವಾಮಿ ಹಾಗೂ ಮುಂಬೈಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ನಟಿ ಕಂಗನಾ ರಣಾವತ್ ವಿರುದ್ದ ಹಕ್ಕುಚ್ಯುತಿ ನಿರ್ಣಯವನ್ನು ಮಂಡಿಸಿದೆ.
ಅರ್ನಬ್ ಗೋಸ್ವಾಮಿ ವಿರುದ್ದವಾಗಿ ವಿಧಾನಸಭೆಯಲ್ಲಿ ಶಿವಸೇನೆಯ ಶಾಸಕ ಪ್ರತಾಪ್ ಸರ್ನಾಯಕ್ ಹಕ್ಕುಚ್ಯುತಿ ನಿರ್ಣಯ ಮಂಡಿಸಿ, ಅರ್ನಬ್ ಅವರು ಅಭಿವ್ಯಕ್ತಿ ಸ್ವಾತಂತ್ರವನ್ನು ಉಲ್ಲಂಘಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬೇಡದ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು.
ಈ ನಿರ್ಣಯದ ಬಗ್ಗೆ ಸದನದಲ್ಲಿ ಬಿಜೆಪಿ ಗದ್ದಲ ಎಬ್ಬಿಸಿದ್ದು ಸದನವನ್ನು 10 ನಿಮಿಷಗಳ ಕಾಲ ಮುಂದೂಡಲಾಗಿತ್ತು.
ಏತನ್ಮಧ್ಯೆ ಶಿವಸೇನೆಯ ಸಂಸದೀಯ ವ್ಯವಹಾರ ಸಚಿವ ಅನಿಲ್ ಪರಬ್ ಅವರು ನಿರ್ಣಯಕ್ಕೆ ಬೆಂಬಲಿಸಿದ್ದು ಎಸ್ಸಿಪಿಯ ಹಿರಿಯ ನಾಯಕ ಛಗನ್ ಭುಜಬಲ್ ಕೂಡಾ ಬೆಂಬಲ ಸೂಚಿಸಿ ಈ ಬಗ್ಗೆ ಸದನದಲ್ಲಿ ಚರ್ಚೆ ನಡೆಸಬೇಕು ಎಂದು ಹೇಳಿದರು.
ಇನ್ನು ವಿಧಾನ ಪರಿಷತ್ತಿನಲ್ಲಿ ಶಾಸಕ ಮನೀಶಾ ಕಾಯಂಡೆ, ಅರ್ನಬ್ ಗೋಸ್ವಾಮಿ ಹಾಗೂ ಬಾಲಿವುಡ್ ನಟಿ ಕಂಗನಾ ರಣಾವತ್ ವಿರುದ್ದ ಹಕ್ಕುಚ್ಯುತಿ ನಿರ್ಣಯ ಮಂಡಿಲಾಗಿದೆ. ಕಾಂಗ್ರೆಸ್ನ ಅಶೋಕ್ ಜಗತಾಪ್ ಅವರು ಬಾಲಿವುಡ್ ನಟಿ ಕಂಗನಾ ವಿರುದ್ದ ಮುಂಬೈಗೆ ಮಾನ ಹಾನಿ ಮಾಡಿದ ಕಾರಣದಲ್ಲಿ ಹಕ್ಕುಚ್ಯುತಿ ನಿರ್ಣಯ ಮಂಡಿಸಿದ್ದು ವಿಧಾನ ಪರಿಷತ್ತಿನ ಅಧ್ಯಕ್ಷ ರಾಮರಾಜೆ ನಾಯಕ್ ನಿಂಬಾಳ್ಕರ್ ಈ ಎರಡೂ ನಿರ್ಣಯಕ್ಕೆ ಒಪ್ಪಿಗೆ ಸೂಚಿಸಿದರು.