ಬೆಂಗಳೂರು, ಸೆ. 8(DaijiworldNews/HR): ಸೆಪ್ಟೆಂಬರ್ 21ರಿಂದ ಸೆಪ್ಟೆಂಬರ್ 30ರವರೆಗೆ ರಾಜ್ಯ ಮಳೆಗಾಲದ ವಿಧಾನಮಂಡಲದ ಅಧಿವೇಶನ ನಡೆಯಲಿದೆ. ಈ ವಿಧಾನ ಮಂಡಲದ ಅಧಿವೇಶನದಲ್ಲಿ ಭಾಗವಹಿಸುವ 72 ಗಂಟೆ ಮೊದಲು ಎಲ್ಲರೂ ಕೋವಿಡ್ ಟೆಸ್ಟ್ ಮಾಡಿಸಿ ಫಲಿತಾಂಶದ ಸಮೇತ ಅಧಿವೇಶಕ್ಕೆ ಬರಬೇಕು. ಎಲ್ಲರೂ ಆರ್ ಟಿ-ಪಿಸಿಆರ್ ಪರೀಕ್ಷೆಯನ್ನೇ ಮಾಡಿಸಿ ಕೊರೋನಾ ಪರೀಕ್ಷಾ ವರದಿ ತರುವಂತೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.21ರಿಂದ ಸೆ.30ರವರೆಗೆ ವಿಧಾನ ಮಂಡಲ ಅಧಿವೇಶನ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 11ಕ್ಕೆ ಕಲಾಪ ಆರಂಭವಾಗಲಿದೆ. ಕೋವಿಡ್ ಹಿನ್ನೆಲೆಯಲ್ಲಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಶಾಸಕರು ಕೂರುವ ಕುರ್ಚಿಗಳ ಮಧ್ಯೆ ಪ್ಲ್ಯಾಸ್ಟಿಕ್ ಶೀಟ್ ಕವರ್ ಮಾಡಲಾಗಿದೆ. ಅಲ್ಲದೇ ವಿಧಾನಸಭೆ ಪ್ರವೇಶ ಮಾಡುವ 72 ಗಂಟೆ ಮೊದಲು ಎಲ್ಲರೂ ಕೊರೊನಾ ಟೆಸ್ಟ್ ಮಾಡಿಸಿ ಫಲಿತಾಂಶದ ಸಮೇತ ಅಧಿವೇಶನಕ್ಕೆ ಬರಬೇಕು. ಎಲ್ಲರೂ ಆರ್ ಟಿ-ಪಿಸಿಆರ್ ಪರೀಕ್ಷೆಯನ್ನೇ ಮಾಡಿಸಬೇಕಿದ್ದು, ಆಯಾ ಭಾಗದ ಶಾಸಕರು ಪರೀಕ್ಷೆ ಮಾಡಿಸಿ ಪ್ರಮಾಣಪತ್ರ ತರುವುದು ಕಡ್ಡಾಯ ಎಂದಿದ್ದಾರೆ.
ಇನ್ನು ಸೆಪ್ಟಂಬರ್ 18ರಿಂದ ವಿಧಾನಸೌಧದಲ್ಲೇ ಅಧಿಕಾರಿಗಳು, ಪತ್ರಕರ್ತರಿಗೆ ಕೊರೊನಾ ಪರೀಕ್ಷೆಯ ಸೌಲಭ್ಯ ಇರುತ್ತದೆ. ಪತ್ರಕರ್ತರ ಗ್ಯಾಲರಿಯಲ್ಲಿ ಈ ಬಾರಿ 15 ಮಂದಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದ್ದು, ಉಳಿದವರನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂರಿಸುವ ಆಲೋಚನೆ ಇದೆ. ಆದರೆ ಅಧಿವೇಶನ ವೀಕ್ಷಣೆಗೆ ಸಾರ್ವಜನಿಕರಿಗೆ ಈ ಬಾರಿ ಪ್ರವೇಶ ಇರುವುದಿಲ್ಲ. ಅಧಿವೇಶನಕ್ಕೆ ಬರುವವರಿಗೆ ಮಾಸ್ಕ್, ಫೇಸ್ ಶೀಲ್ಡ್ ಹಾಕೋದು ಕಡ್ಡಾಯವಾಗಿದೆ. ಎಲ್ಲರಿಗೂ ನಾವು ಮಾಸ್ಕ್, ಫೇಸ್ ಶೀಲ್ಡ್ ಕೊಡುತ್ತೇವೆ, ಹೀಗಾಗಿ ಎಲ್ಲರೂ ನಿಯಮ ಪಾಲಿಸಬೇಕಿದೆ ಎಂದು ತಿಳಿಸಿದ್ದಾರೆ.