ನವದೆಹಲಿ, ಸೆ. 08 (DaijiworldNews/MB) : ಅರುಣಾಚಲ ಪ್ರದೇಶದಿಂದ ನಾಪತ್ತೆಯಾಗಿದ್ದ ಐವರು ಯುವಕರು ಚೀನಾದ ಗಡಿಯೊಳಗೆ ಪತ್ತೆಯಾಗಿದ್ದಾರೆ ಎಂದು ಸಚಿವ ಕಿರಣ್ ರಿಜಿಜು ತಿಳಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಭಾರತೀಯ ಸೇನೆಯು ಕಳುಹಿಸಿದ ಹಾಟ್ಲೈನ್ ಸಂದೇಶಕ್ಕೆ ಚೀನಾದ ಪೀಪಲ್ ಲಿಬರೇಷನ್ ಆರ್ಮಿ(ಪಿಎಲ್ಎ) ಪ್ರತಿಕ್ರಿಯಿಸಿದೆ. ಅರುಣಾಚಲ ಪ್ರದೇಶದಿಂದ ಕಾಣೆಯಾದ ಯುವಕರನ್ನು ಚೀನಾದಲ್ಲಿ ಪತ್ತೆ ಮಾಡಲಾಗಿದೆ ಎಂದು ಅವರು ಖಚಿತಪಡಿಸಿದ್ದಾರೆ. ನಮ್ಮ ಪ್ರಾಧಿಕಾರಕ್ಕೆ ಅವರನ್ನು ಹಸ್ತಾಂತರಿಸುವ ಹೆಚ್ಚಿನ ಪ್ರಕ್ರಿಯೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಭಾರತೀಯ ಸೇನೆಯ ಕೂಲಿಗಳು ಹಾಗೂ ಮಾರ್ಗದರ್ಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ನಾಚೋ ಪ್ರದೇಶದ ಗ್ರಾಮದ ಐವರು ನಾಪತ್ತೆಯಾಗಿದ್ದರು. ಕಾಡಿನಲ್ಲಿ ಏಳು ಜನರ ತಂಡ ಬೇಟೆಯಾಡಲು ಹೋದ ಸಂದರ್ಭದಲ್ಲಿ ನಾಚೋದ ಉತ್ತರ ಭಾಗದ 12 ಕಿ.ಮೀ ದೂರದ ಸೇನಾ ಕಾವಲು ವಲಯ ಸೆರಾ 7 ರಿಂದ ಚೀನಾ ಪಡೆಗಳು ಐವರನ್ನು ಅಪಹರಣ ಮಾಡಿದೆ ಎಂದು ಮನೆಗೆ ಮರಳಿದ್ದ ಇಬ್ಬರು ತಿಳಿಸಿದ್ದರು.