ಮಂಡ್ಯ, ಸೆ. 08 (DaijiworldNews/MB) : ಡ್ರಗ್ಸ್ ಮಾಫಿಯಾವೇ ಸಮ್ಮಿಶ್ರ ಸರ್ಕಾರ ಬೀಳಲು ಕಾರಣವೆಂದು ಎಚ್.ಡಿ.ಕುಮಾರಸ್ವಾಮಿ ಅವರು ಮೊದಲೇ ಹೇಳಬೇಕಿತ್ತು. ನಶೆಯಿಂದ ಹೊರಬರಲು ಅವರಿಗೆ ಒಂದು ವರ್ಷ ಬೇಕಾಯ್ತಾ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಪ್ರಶ್ನಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈಗ ಡ್ರಗ್ಸ್ ವಿಷಯ ಬಂದಿದ್ದು ಸರ್ಕಾರ ಬೀಳಲು ಡ್ರಗ್ಸ್ ಮಾಫಿಯಾ ಕಾರಣ ಎನ್ನುತ್ತಿದ್ಧಾರೆ. ಮುಂದೆ ಲಿಕ್ಕರ್ ಬಗ್ಗೆ ಏನಾದರು ನಡೆದರೆ ಸರ್ಕಾರ ಪತನಕ್ಕೆ ಲಿಕ್ಕರ್ ಲಾಭಿಯೇ ಕಾರಣ ಎಂದು ಎಚ್ಡಿಕೆಯನ್ನು ಲೇವಡಿ ಮಾಡಿದ ಅವರು, ಎಚ್ಡಿಕೆ ಊಸರವಳ್ಳಿ ಇದ್ದಂತೆ ಸಮಯಕ್ಕೆ ತಕ್ಕ ಮಾತನಾಡುತ್ತಾರೆ. ಹಾಗೆಯೇ ಬದಲಾಗುತ್ತಾರೆ ಎಂದು ಹೇಳಿದರು.
ನಟಿ ರಾಗಿಣಿಯವರು 2ನೇ ಆರೋಪಿಯಾಗಿದ್ದು ಮೊದಲ ಆರೋಪಿ ಬಗ್ಗೆ ಯಾರೂ ಹೇಳುತ್ತಿಲ್ಲ. ಆರೋಪಿ ಯಾರೇ ಆದರೂ ಕೂಡಾ ಅವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಇನ್ನು ಸೆಲೆಬ್ರೆಟಿಗಳು ಗಾಜಿನ ಮನೆಯಲ್ಲಿ ಇದ್ದಂತೆ, ಒಂದು ಸಣ್ಣ ತಪ್ಪು ಕೂಡಾ ಜನರಿಗೆ ಬೇಗ ಕಾಣುತ್ತದೆ. ಸ್ಯಾಂಡಲ್ವುಡ್ ಈಗ ನಶೆವುಡ್ ಆಗಿಬಿಟ್ಟಿದೆ. ಸಿನಿಮಾ ರಂಗದಲ್ಲಿರುವ ಎಲ್ಲರೂ ಕೂಡಾ ಡ್ರಗ್ಸ್ ತೆಗೆದುಕೊಳ್ಳುವುದಿಲ್ಲ. ಆದರೆ ಹಾಲು ಹರಳು ಉಪ್ಪಿನ ಮೇಲೆ ಬಿದ್ದರೂ ಹರಳು ಉಪ್ಪು ಹಾಲಿನಲ್ಲಿ ಬಿದ್ದರೂ ಹಾಳಾಗುವುದು ಹಾಲೇ. ಅದೆ ಸ್ಥಿತಿ ಈಗ ಸ್ಯಾಂಡಲ್ವುಡ್ನಲ್ಲಿ ಆಗಿದೆ ಎಂದು ಹೇಳಿದರು.