ಮೈಸೂರು, ಸೆ. 08 (DaijiworldNews/MB) : ಕಳೆದ ಉಪ ಚುನಾವಣೆಯಲ್ಲಿ ನಮ್ಮ ಪರ ನಟಿ ರಾಗಿಣಿ ಪ್ರಚಾರ ಮಾಡಿದ್ದು ನಿಜ. ಆದರೆ ಅವರು ಬಿಜೆಪಿ ಕಾರ್ಯಕರ್ತೆಯಾಗಲಿ ಸದಸ್ಯೆಯಾಗಲಿ ಅಲ್ಲ. ಬರೀ ಒಂದು ಪಕ್ಷದ ಪ್ರಚಾರದಲ್ಲಿ ತೊಡಗಿಕೊಂಡ ಕಾರಣಕ್ಕೆ ಅವರು ಪಕ್ಷದ ಕಾರ್ಯಕರ್ತರಾಗಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ತಮ್ಮ ತಂದೆ ಹಾಗೂ ಕರ್ನಾಟಕ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಈ ವಿಚಾರದಲ್ಲಿ ಯಾರ ರಕ್ಷಣೆಗೂ ಇಳಿದಿಲ್ಲ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ ಅವರು, ರಾಗಿಣಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿರಬಹುದು, ಆದರೆ ಅದರಿಂದಾಗಿ ಅವರು ಬಿಜೆಪಿ ಕಾರ್ಯಕರ್ತೆ ಅಥವಾ ನಾಯಕರಾಗುವುದಿಲ್ಲ. ಒಂದು ನಿರ್ದಿಷ್ಟ ಪಕ್ಷದ ಪರವಾಗಿ ಪ್ರಚಾರ ಮಾಡುವ ಯಾರಾದರೂ, ಆ ಪಕ್ಷದ ಕಾರ್ಯಕರ್ತರು ಅಥವಾ ನಾಯಕರು ಆಗುತ್ತಾರೆ ಎಂಬು ತಪ್ಪು ಗ್ರಹಿಕೆ. ರಾಗಿಣಿ ಪ್ರಸಿದ್ಧ ನಟಿಯಾಗಿದ್ದರಿಂದ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡಲು ಬಯಸಿದ್ದರು. ಅದು ಅವರು ಹಾಗೂ ಅಭ್ಯರ್ಥಿಯ ವೈಯಕ್ತಿಕ ಆಯ್ಕೆಯಾಗಿದೆ. ಅದು ಅವರ ವೈಯಕ್ತಿಯ ವಿಚಾರ. ಇದಕ್ಕೆ ಬಿಜೆಪಿಯನ್ನು ಹೇಗೆ ದೂಷಿಸುವುದು? ಎಂದು ಪ್ರಶ್ನಿಸಿದರು.
ಈ ಹಿಂದೆ ಓರ್ವ ನಟ ಅಥವಾ ನಟಿ ವಿವಿಧ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ ಅನೇಕ ನಿದರ್ಶನಗಳಿವೆ ಎಂದು ಹೇಳಿದ ಅವರು, ಹಾಗಿರುವಾಗ ಒಂದೇ ಪಕ್ಷದ ಸದಸ್ಯರಾಗಲು ಸಾಧ್ಯವಿಲ್ಲ. ನಮ್ಮ ಪಕ್ಷದಲ್ಲಿ ಯಾರನ್ನೂ ರಕ್ಷಿಸಲು ಯಾವುದೇ ಒತ್ತಡವಿಲ್ಲ ಎಂದು ಪ್ರತಿಪಾದಿಸಿದರು.
"ರಾಜ್ಯದಾದ್ಯಂತ ಹರಡಿರುವ ಡ್ರಗ್ ಮಾಫಿಯಾವನ್ನು ಕೆಡವಲು ಶ್ರಮಿಸುತ್ತಿರುವ ನಮ್ಮ ಪಕ್ಷದ ಸರ್ಕಾರದ ವಿರುದ್ಧ ಆಧಾರರಹಿತ ಆರೋಪಗಳು ಮಾಡಲಾಗುತ್ತಿದೆ. ಡ್ರಗ್ಸ್ ಮಾಫಿಯಾದ ವಿರುದ್ದ ಬಿಜೆಪಿ ಸರ್ಕಾರ ಜವಾಬ್ದಾರಿಯುತವಾಗಿ ಮತ್ತು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸರ್ಕಾರವನ್ನು ಸಮರ್ಥಿಸಿಕೊಂಡರು.
ಇನ್ನು ತಾನು ಭ್ರಷ್ಟಾಚಾರದಲ್ಲಿ ತೊಡಗಿದ್ದೇನೆ ಎಂದು ಆರೋಪ ಮಾಡುತ್ತಿರುವವರು ಸಾಕ್ಷ್ಯಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಬೇಕು ಎಂದು ವಿಜಯೇಂದ್ರ ವಿಪಕ್ಷ ಮುಖಂಡರುಗಳಿಗೆ ಸವಾಲೆಸೆದರು.
"ನನ್ನ ಕುಟುಂಬವು ಇಂತಹ ಆರೋಪಗಳನ್ನು ಎದುರಿಸುತ್ತಿರುವುದು ಇದೇ ಮೊದಲಲ್ಲ. ಈ ರೀತಿಯ ಆರೋಪಗಳೂ ಈ ಹಿಂದೆ ಇದ್ದವು. ಈಗ ನಮ್ಮ ವಿರೋಧಿಗಳು ಕೂಡ ಅದೇ ಆರೋಪಗಳನ್ನು ಮಾಡುತ್ತಿದ್ದಾರೆ. ಅವರು ನನ್ನ ವಿರುದ್ಧ ಪುರಾವೆಗಳನ್ನು ಹೊಂದಿದ್ದರೆ, ಅದನ್ನು ತೋರಿಸಲಿ. ಮಾಧ್ಯಮದ ಮೂಲಕ ನನ್ನ ವಿರೋಧಿಗಳಿಗೆ ಸಾರ್ವಜನಿಕವಾಗಿ ಪುರಾವೆಗಳೊಂದಿಗೆ ಹೊರಬರಲು ನಾನು ಮನವಿ ಮಾಡುತ್ತಿದ್ದೇನೆ "ಎಂದು ಅವರು ಹೇಳಿದರು.
ಬಿಜೆಪಿ ನಾಯಕರಲ್ಲಿ ಒಂದು ಭಾಗವು ರಾಗಿಣಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಮತ್ತು ಪ್ರಕರಣದ ತನಿಖೆಯ ಬಗ್ಗೆ ಮೃದು ಧೋರಣೆ ತೋರುವಂತೆ ನಗರ ಪೊಲೀಸರಿಗೆ ಅನಗತ್ಯವಾಗಿ ಒತ್ತಡ ಹೇರುತ್ತಿದೆ ಎಂದು ಸಿದ್ದರಾಮಯ್ಯ ಸೋಮವಾರ ಆರೋಪಿಸಿದ್ದರು.