ನವದೆಹಲಿ, ಸೆ. 08 (DaijiworldNews/MB) : ಕೊರೊನಾ ಕಾರಣದಿಂದಾಗಿ ಮಾರ್ಚ್ನಿಂದ ಮುಚ್ಚಲಾಗಿದ್ದು ಇದೀಗ ಸೆಪ್ಟಂಬರ್ 21ರಿಂದ 9ರಿಂದ 12ನೆ ತರಗತಿಯ ವಿದ್ಯಾರ್ಥಿಗಳಿಗಾಗಿ ಶಾಲೆಗಳನ್ನು ಭಾಗಶಃ ತೆರೆಯಲು ಅವಕಾಶ ನೀಡಿ ಕೇಂದ್ರ ಗೃಹಸಚಿವಾಲಯ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.
ಸೆ. 21ರಿಂದ 9 ರಿಂದ 12ನೆಯ ತರಗತಿವರೆಗಿನ ಮಕ್ಕಳು ಸ್ವ ಇಚ್ಛೆಯ ಆಧಾರದಲ್ಲಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದುಕೊಳ್ಳಲು ಶಾಲೆಗಳಿಗೆ ತೆರಳಲು ಅವಕಾಶ ನೀಡಲಾಗುತ್ತಿದೆ. ಈ ಮೂಲಕ ಶಾಲೆಗಳ ಭಾಗಶಃ ಚಟುವಟಿಕೆಗಳು ಪುನಃ ಆರಂಭವಾಗಲಿವೆ. ವಿದ್ಯಾರ್ಥಿಗಳು ಆನ್ಲೈನ್ ಮೂಲಕವೂ ವಿದ್ಯಾಭ್ಯಾಸ ಮುಂದುವರೆಸಬಹುದಾಗಿದೆ.
ವಿದ್ಯಾರ್ಥಿಗಳು ಸುರಕ್ಷಿತವಾಗಿ ತರಗತಿಗಳಿಗೆ ದಾಖಲಾಗಲು ಮತ್ತು ಅವರ ಶೈಕ್ಷಣಿಕ ವರ್ಷವನ್ನು ಕಳೆದುಕೊಳ್ಳದಂತೆ ನೋಡಿಕೊಳ್ಳಲು ಗೃಹ ಸಚಿವಾಲಯವು ಹಲವು ಆರೋಗ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಪ್ರಕಟಿಸಿದೆ.
ಶಾಲೆಗಳಲ್ಲಿ ಕನಿಷ್ಠ ಆರು ಅಡಿ ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಸುವುದು ಕಡ್ಡಾಯವಾಗಿದೆ. ಹಾಗೆಯೇ ಶಾಲೆಯ ಆವರಣದಲ್ಲಿ ಉಗುಳುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಅಸೆಂಬ್ಲಿಗಳು, ಕಾರ್ಯಕ್ರಮಗಳನ್ನು ನಡೆಸುವವುದನ್ನು ಕೂಡಾ ಕಡ್ಡಾಯವಾಗಿ ನಿಷೇಧಿಸಲಾಗಿದೆ.
ಇನ್ನು ಕಂಟೈನ್ಮೆಂಟ್ ಝೋನ್ ಹೊರಗಿನ ಶಾಲೆಗಳಿಗೆ ಮಾತ್ರ ತೆರೆಯಲು ಅವಕಾಶ ನೀಡಲಾಗಿದೆ.