ಬಾಗಲಕೋಟೆ, ಸೆ.9(DaijiworldNews/HR): 10 ದಿನದ ಹಸುಳೆಯನ್ನು 30 ಸಾವಿರ ರೂಪಾಯಿಗೆ ಮಾರಾಟ ಮಾಡಿದ ಘಟನೆ ಬಾಗಲಕೋಟೆ ಜಿಲ್ಲೆ ಮುಧೋಳ ನಗರದ ಭಜಂತ್ರಿ ಓಣಿ ಎಂಬಲ್ಲಿ ನಡೆದಿದೆ.
ಗಂಡು ಮಕ್ಕಳಿಲ್ಲ ಮೂವರು ಹೆಣ್ಣು ಮಕ್ಕಳೆಂದು ಕೊರಗುತ್ತಿದ್ದ ವ್ಯಕ್ತಿಯೊಬ್ಬ 10 ದಿನದ ಮಗುವನ್ನು 30 ಸಾವಿರ ರೂಪಾಯಿಗೆ ಖರೀದಿಸಿ ತಂದು ಸಾಕುತ್ತಿರುವುದು ತಿಳಿದು ಬಂದಿದೆ.
ಅಕ್ರಮವಾಗಿ ಗಂಡು ಮಗುವನ್ನು ಸಾಕುತ್ತಿರುವ ಬಗ್ಗೆ ಮಾಹಿತಿ ಪಡೆದ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ ಮಗುವನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಾಗಲಕೋಟೆಯ ರಬಕವಿ ಮೂಲದ ಮಹಿಳೆಯಿಂದ ವ್ಯಕ್ತಿ ಮಗುವನ್ನು ಖರೀದಿಸಿ ಅಕ್ರಮವಾಗಿ ಸಾಕುತ್ತಿರುವ ಮಾಹಿತಿ ಲಭಿಸಿದ್ದು. ಮೂವರು ಹೆಣ್ಣು ಮಕ್ಕಳಿದ್ದು ಗಂಡು ಮಗು ಬೇಕೆಂಬ ಕಾರಣಕ್ಕೆ ಮಗುವನ್ನು ಖರೀದಿಸಲಾಗಿದೆ ಎಂದು ವ್ಯಕ್ತಿ ಹೇಳಿದ್ದಾನೆ.
ಮಕ್ಕಳ ಮಾರಾಟ ದಂಧೆ ನಡೆಯುತ್ತಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.