ಮುಂಬೈ, ಸೆ 09 (DaijiworldNews/PY): ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿದ್ದು, ಈ ನಡುವೆ, ಬಿಎಂಸಿ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಮುಂಬೈನ ಪ್ರತಿಷ್ಠಿತ ಪಾಲಿ ಹಿಲ್ ಪ್ರದೇಶದಲ್ಲಿರುವ ಮಣಿಕರ್ಣಿಕಾ ಫಿಲ್ಮ್ ಕಚೇರಿಯನ್ನು ನೆಲಸಮಗೊಳಿಸಲು ಆರಂಭಿಸಿದ್ದಾರೆ.
ಬುಧವಾರ ಬೆಳಗ್ಗೆ ಬೃಹತ್ ಮುಂಬೈಯ ಮಹಾನಗರ ಪಾಲಿಕೆ (ಬಿಎಂಸಿ) ಅಧಿಕಾರಿಗಳು ಕಟ್ಟಡವನ್ನು ನೆಲಸಮಗೊಳಿಸಲು ಆರಂಭಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, ಮಣಿಕರ್ಣಿಕಾ ಕಚೇರಿಯನ್ನು ನೆಲಸಮ ಮಾಡುವ ಬಗ್ಗೆ ತಿಳಿಸಿದ್ದಾರೆ. ಇದು ಕಟ್ಟಡವಲ್ಲ ರಾಮಮಂದಿರ. ಇಂದು ಇದನ್ನು ಧ್ವಂಸ ಮಾಡಲು ಬಾಬರ್ ಬಂದಿದ್ದಾರೆ. ರಾಮ ದೇವಾಲಯ ಧ್ವಂಸವಾಗುತ್ತದೆ. ಆದರೆ, ಈ ದೇವಾಲಯವನ್ನು ಮತ್ತೆ ನಿರ್ಮಿಸಲಾಗುವುದು. ಜೈಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
ಕಚೇರಿ ನೆಲಸಮ ಮಾಡುವ ಬಗ್ಗೆ ಕಂಗನಾರಣಾವತ್ ಅವರಿಗೆ ಬೃಹತ್ ಮುಂಬೈಯ ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ನೋಟಿಸ್ ನೀಡಿದ್ದರು. ಅಲ್ಲದೇ, ಈ ಬಗ್ಗೆ 24 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿದ್ದರು.