ನವದೆಹಲಿ, ಸೆ. 09 (DaijiworldNews/MB) : ಕೇಂದ್ರ ಸರ್ಕಾರ ಹಾಗೂ ತನ್ನ ಪಕ್ಷದ ಕೆಲವು ಕ್ರಮಗಳ ವಿರುದ್ದ ವಾಗ್ದಾಳಿ ನಡೆಸುತ್ತಲೇ ಇರುವ ಬಿಜೆಪಿ ಮುಖಂಡ, ರಾಜ್ಯಸಭಾ ಸದಸ್ಯ ಸುಬ್ರಹ್ಮಣ್ಯನ್ ಸ್ವಾಮಿ ಅವರು ಇದೀಗ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯ ಅವರನ್ನು ಹುದ್ದೆಯಿಂದ ತೆಗೆಯಬೇಕು ಎಂದು ಆಗ್ರಹಿಸಿ ಇದಕ್ಕೆ ಗುರುವಾರದವರೆಗೆ ಮಾತ್ರ ಗಡುವು ನೀಡಿದ್ದಾರೆ.
ಅಮಿತ್ ಮಾಳವಿಯ ತನ್ನ ವಿರುದ್ದ ನಕಲಿ ಟ್ವೀಟ್ ಅಭಿಯಾನ ಆರಂಭಿಸಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಬುಧವಾರವಷ್ಟೇ ಆರೋಪ ಮಾಡಿದ್ದು ಇದೀಗ ಗುರುವಾರದೊಳಗೆ ಅವರನ್ನು ಹುದ್ದೆಯಿಂದ ಕಿತ್ತೊಗೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ಬಗ್ಗೆ ಬುಧವಾರ ಟ್ವೀಟ್ ಮಾಡಿರುವ ಅವರು, ಪಕ್ಷವು ಅಮಿತ್ನನ್ನು ಹುದ್ದೆಯಿಂದ ತೆಗೆಯದಿದ್ದರೆ ತನ್ನನ್ನು ಸಮರ್ಥಿಸುತ್ತಿಲ್ಲ ಎಂದು ತಿಳಿದಂತೆ ಆಗುತ್ತದೆ. ಪಕ್ಷದ ಅಭಿಪ್ರಾಯವನ್ನು ಕೇಳಲು ಯಾವುದೇ ವೇದಿಕೆಯಿಲ್ಲದ ಕಾರಣ ನನ್ನನ್ನು ನಾನೇ ಸಮರ್ಥಿಸಿಕೊಳ್ಳಬೇಕಾಗಿದೆ ಎಂದು ಹೇಳಿದ್ದಾರೆ. ಹಾಗೆಯೇ ಅವರನ್ನು ಹುದ್ದೆಯಿಂದ ಕಿತ್ತೊಗೆಯುವುದು ತಾವು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರ ಮುಂದೆ ಇಟ್ಟಿರುವ ''ರಾಜಿಪಂಚಾಯತಿ ಪ್ರಸ್ತಾಪ'' ಎಂದು ಕೂಡಾ ತಿಳಿಸಿದ್ದಾರೆ.
ಇನ್ನು ಅವರು ಮಾಧ್ಯಮವೊಂದರ ಸಂದರ್ಶನವೊಂದರಲ್ಲಿ ಮಾತನಾಡಿ, ಕೊರೊನಾಗೆ ಕೇಂದ್ರ ಸರ್ಕಾರ ಘೋಷಿಸಿದ ಪ್ಯಾಕೇಜ್ ಅಸಮರ್ಪಕ ಎಂದು ಹೇಳಿದ್ದು ಇದೇ ಸಂದರ್ಭದಲ್ಲಿ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಹಿಂದುತ್ವ ಗೆಲ್ಲಲಿದೆ ಎಂದು ವಿಶ್ವಾಸವನ್ನು ಕೂಡಾ ವ್ಯಕ್ತಪಡಿಸಿದ್ದಾರೆ.