ಶ್ರೀನಗರ, ಸೆ. 09 (DaijiworldNews/MB) : ಹದಿನೆಂಟು ವರ್ಷಗಳ ಹಿಂದೆ ತಮ್ಮ ವಾಸ್ತವ್ಯಕ್ಕಾಗಿ ನೀಡಲಾಗಿದ್ದ ನಿವಾಸವನ್ನು ಸ್ವ ಇಚ್ಛೆಯಿಂದ ಶೀಘ್ರವೇ ತೆರವುಗೊಳಿಸುತ್ತೇನೆ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರು ತಿಳಿಸಿದ್ದಾರೆ.
ಈ ಬಗ್ಗೆ ಜಮ್ಮು–ಕಾಶ್ಮೀರ ಆಡಳಿತಕ್ಕೆ ಜುಲೈ ತಿಂಗಳಲ್ಲಿ ಬರೆದಿದ್ದ ಪತ್ರವೊಂದನ್ನು ಟ್ವೀಟರ್ನಲ್ಲಿ ಪೋಸ್ಟ್ ಮಾಡಿರುವ ಅವರು, ''ಜಮ್ಮು–ಕಾಶ್ಮೀರ ಆಡಳಿತಕ್ಕೆ ನನ್ನ ಪತ್ರ. ನಾನು ಅಕ್ಟೋಬರ್ ಅಂತ್ಯದೊಳಗೆ ಶ್ರೀನಗರದಲ್ಲಿನ ನನ್ನ ಸರ್ಕಾರಿ ವಸತಿ ಸೌಕರ್ಯವನ್ನು ಖಾಲಿ ಮಾಡುತ್ತೇನೆ. ಕಳೆದ ವರ್ಷ ಕೆಲ ಮಾಧ್ಯಮಗಳು ಸರ್ಕಾರಿ ನಿವಾಸವನ್ನು ಖಾಲಿ ಮಾಡುವಂತೆ ನನಗೆ ನೊಟೀಸ್ ನೀಡಲಾಗಿದೆ ಎಂದು ಪ್ರಕಟಿಸಿದ್ದರು. ಆದರೆ ಅದು ಸುಳ್ಳಾಗಿದ್ದು ನನ್ನ ಸ್ವಂತ ಇಚ್ಛೆಯಿಂದ ನಾನು ಈ ಸರ್ಕಾರಿ ನಿವಾಸವನ್ನು ಖಾಲಿ ಮಾಡುತ್ತಿದ್ದೇನೆ'' ಎಂದು ಹೇಳಿದ್ದಾರೆ.
ಇನ್ನು ಪತ್ರದಲ್ಲಿ 2002ರಲ್ಲಿ ಲೋಕಸಭಾ ಸದಸ್ಯರಾಗಿದ್ದ ಸಂದರ್ಭ ತನಗೆ ಸರ್ಕಾರಿ ನಿವಾಸವನ್ನು ನೀಡಲಾಗಿದ್ದು ಕೇಂದ್ರಾಡಳಿತ ಪ್ರದೇಶದಲ್ಲಿ ನಿಯಾಮಾವಳಿಗಳು ಬದಲಾದ ಹಿನ್ನೆಲೆ ಈ ನಿವಾಸವನ್ನು ನಾನು ಖಾಲಿ ಮಾಡಲು ಇಚ್ಛಿಸುತ್ತೇನೆ ಎಂದು ಬರೆಯಲಾಗಿದೆ.