ಮುಂಬೈ, ಸೆ 09 (DaijiworldNews/PY): ಬಾಲಿವುಡ್ ನಟಿ ಕಂಗನಾ ಅವರ ಮಣಿಕರ್ಣಿಕಾ ಫಿಲ್ಮ್ ಕಚೇರಿಯನ್ನು ಬಿಎಂಸಿ ಅಧಿಕಾರಿಗಳು ಧ್ವಂಸಗೊಳಿಸುತ್ತಿದ್ದು, ಕಟ್ಟಡವನ್ನು ಧ್ವಂಸ ಮಾಡಬಾರದು ಎಂದು ಬಾಂಬೆ ಹೈಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ.
ಮಂಗಳವಾರ ಕಂಗನಾ ಅವರಿಗೆ ಬಿಎಂಸಿ ನೋಟಿಸ್ ಜಾರಿ ಮಾಡಿದ್ದು, ಕಟ್ಟಡ ಧ್ವಂಸ ಮಾಡುವ ಬಗ್ಗೆ ಹೇಳಿತ್ತು. ಕಟ್ಟಡ ಧ್ವಂಸಮಾಡುತ್ತಿರುವ ಬಗ್ಗೆ ಕಂಗನಾ ರಣಾವತ್ ಅವರ ಪರ ವಕೀಲರು ಮೇಲ್ವನವಿ ಸಲ್ಲಿಸಿದ್ದರು. ಈ ಮನವಿಯನ್ನು ಹೈಕೋರ್ಟ್ ವಿಚಾರಣೆ ನಡೆಸಿದ್ದು, ಬಿಎಂಸಿ ಕಾರ್ಯಾಚರಣೆಯನ್ನು ತಡೆದಿದೆ. ವಿಚಾರಣೆಯನ್ನು ಸೆ.10ರ ಗುರುವಾರಕ್ಕೆ ಮುಂದೂಡಿದೆ ಎಂದು ವರದಿ ತಿಳಿಸಿದೆ.
ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವೆ ಜಟಾಪಟಿ ಮುಂದುವರೆದಿದ್ದು, ಈ ನಡುವೆ, ಬಿಎಂಸಿ ಅಧಿಕಾರಿಗಳು ಬುಧವಾರ ಬೆಳಿಗ್ಗೆ ಮುಂಬೈನ ಪ್ರತಿಷ್ಠಿತ ಪಾಲಿ ಹಿಲ್ ಪ್ರದೇಶದಲ್ಲಿರುವ ಮಣಿಕರ್ಣಿಕಾ ಫಿಲ್ಮ್ ಕಚೇರಿಯನ್ನು ನೆಲಸಮಗೊಳಿಸಲು ಆರಂಭಿಸಿದ್ದರು.
ಈ ಬಗ್ಗೆ ಟ್ವೀಟ್ ಮಾಡಿರುವ ಕಂಗನಾ, ಮಣಿಕರ್ಣಿಕಾ ಕಚೇರಿಯನ್ನು ನೆಲಸಮ ಮಾಡುವ ಬಗ್ಗೆ ತಿಳಿಸಿದ್ದಾರೆ. ಇದು ಕಟ್ಟಡವಲ್ಲ ರಾಮಮಂದಿರ. ಇಂದು ಇದನ್ನು ಧ್ವಂಸ ಮಾಡಲು ಬಾಬರ್ ಬಂದಿದ್ದಾರೆ. ರಾಮ ದೇವಾಲಯ ಧ್ವಂಸವಾಗುತ್ತದೆ. ಆದರೆ, ಈ ದೇವಾಲಯವನ್ನು ಮತ್ತೆ ನಿರ್ಮಿಸಲಾಗುವುದು. ಜೈಶ್ರೀರಾಮ್ ಎಂದು ಬರೆದುಕೊಂಡಿದ್ದಾರೆ.
ಕಚೇರಿ ನೆಲಸಮ ಮಾಡುವ ಬಗ್ಗೆ ಕಂಗನಾರಣಾವತ್ ಅವರಿಗೆ ಬೃಹತ್ ಮುಂಬೈಯ ಮಹಾನಗರ ಪಾಲಿಕೆ ಅಧಿಕಾರಿಗಳು ಮಂಗಳವಾರ ನೋಟಿಸ್ ನೀಡಿದ್ದರು. ಅಲ್ಲದೇ, ಈ ಬಗ್ಗೆ 24 ಗಂಟೆಯೊಳಗೆ ಪ್ರತಿಕ್ರಿಯೆ ನೀಡುವಂತೆ ತಿಳಿಸಿದ್ದರು.