ನವದೆಹಲಿ, ಸೆ.9(DaijiworldNews/HR): ಕೋವಿಡ್ ಸಾಂಕ್ರಾಮಿಕದ ಕಾರಣ ದೇಶದಲ್ಲಿ ಜಾರಿಗೊಳಿಸಿದ ಹಠಾತ್ ಲಾಕ್ಡೌನ್ ಅಸಂಘಟಿತ ವಲಯದವರಿಗೆ ಮರಣದಂಡನೆಯಾಗಿ ಪರಿಣಮಿಸಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, 21 ದಿನಗಳಲ್ಲಿ ಕೊರೊನಾವನ್ನು ಕೊನೆಗಾಣಿಸುವುದಾಗಿ ಭರವಸೆ ನೀಡಲಾಯಿತು. ಆದರೆ, ಈ ನಿರ್ಧಾರವು ಕೋಟ್ಯಂತರ ಉದ್ಯೋಗ, ಸಣ್ಣ ಉದ್ಯಮಗಳನ್ನು ಕೊನೆಗಾಣಿಸಿತು. ಕೇಂದ್ರ ಸರ್ಕಾರವು ಜಾರಿಗೊಳಿಸಿದ್ದ ಲಾಕ್ಡೌನ್ ಜನವಿರೋಧಿ ಎಂದೂ ಟೀಕಿಸಿದ್ದಾರೆ.
ಇನ್ನು ಕೇಂದ್ರದ ಎನ್ಡಿಎ ಸರ್ಕಾರವನ್ನು ಟೀಕಿಸಿ ಸರಣಿ ವಿಡಿಯೊ ಬಿಡುಗಡೆ ಮಾಡುತ್ತಿರುವ ರಾಹುಲ್, ನಾಲ್ಕನೇ ವಿಡಿಯೊವನ್ನು, 'ಮೋದಿ ಸರ್ಕಾರ ಭಾರತದ ಆರ್ಥಿಕತೆಯನ್ನು ನಾಶ ಮಾಡಿದ್ದು ಹೇಗೆ' ಎಂಬ ಶೀರ್ಷಿಕೆಯಡಿ ಬಿಡುಗಡೆ ಮಾಡಿದ್ದು,ಅಸಂಘಟಿತ ವಲಯದಲ್ಲಿ ದುಡಿಯುತ್ತಿರುವ ಬಡ ಜನರು ದಿನಗೂಲಿ ಅವಲಂಬಿತರಾಗಿದ್ದಾರೆ. ಇವರ ಮೇಲೆ ಸರ್ಕಾರವು ಕೊರೊನಾ ಲಾಕ್ಡೌನ್ನೊಂದಿಗೆ ಪ್ರಹಾರ ನಡೆಸಿತು' ಎಂಬುದಾಗಿ ಆರೋಪಿಸಿದ್ದಾರೆ.