ದಾವಣಗೆರೆ, ಸೆ.9(DaijiworldNews/HR): ಐಎಎಸ್ ಅಧಿಕಾರಿಗಳ ಕಿರುಕುಳಕ್ಕೆ ಬೇಸೆತ್ತು ದಾವಣಗೆರೆಯಲ್ಲಿ ಆಟೋರಿಕ್ಷಾ ಚಾಲಕರಾಗಿ ಕೆಲಸ ಮಾಡುತ್ತಿದ್ದ ಡಾ. ಎಂ.ಎಚ್. ರವೀಂದ್ರನಾಥ್ ಗೆ ಕೊಪ್ಪಳ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾಗಿ ಸರ್ಕಾರ ವರ್ಗಾವಣೆ ಮಾಡಿದ್ದು, ಡಾ. ರವೀಂದ್ರನಾಥ್ ಎರಡು ಮೂರು ದಿನದಲ್ಲಿ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಐಎಎಸ್ ಅಧಿಕಾರಿಗಳು ವಿನಾಕಾರಣ ಅಮಾನತುಗೊಳಿಸಿ 15 ತಿಂಗಳ ವೇತನ ನೀಡಿಲ್ಲ ಎಂದು ಬಳ್ಳಾರಿ ಜಿಲ್ಲಾ ಆರ್ ಸಿ ಎಚ್ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದ ರವೀಂದ್ರನಾಥ್ ಜೀವನ ನಿರ್ವಹಣೆಗೆ ಆಟೋರಿಕ್ಷಾ ಓಡಿಸುತ್ತಿರುವುದಾಗಿ ಹೇಳಿದ್ದರು. ಅದರಂತೆ ಕೆಲ ದಿನಗಳ ಕಾಲ ದಾವಣಗೆರೆಯಲ್ಲಿ ಆಟೋ ಓಡಿಸುತ್ತಿದ್ದರು.
ಇನ್ನು ಎನ್ಎಂಎಚ್ ಯೋಜನೆಯಡಿ ಇ- ಟೆಂಡರ್ ಪ್ರಕ್ರಿಯೆಯಲ್ಲಿ ಡಾ. ರವೀಂದ್ರನಾಥ್ ತಪ್ಪು ಮಾಡಿದ್ದಾರೆ ಎಂದು ಬಳ್ಳಾರಿ ಜಿಲ್ಲಾ ಪಂಚಾಯತ್ ನ ಹಿಂದಿನ ಸಿಇಒ ನಿತಿನ್ ಅಮಾನತುಗೊಳಿಸಿದ್ದರು. ಅಮಾನತು ಆದೇಶ ಪ್ರಶ್ನಿಸಿ ಡಾ. ರವೀಂದ್ರನಾಥ್ ಕೆಎಟಿ ಮೊರೆ ಹೋಗಿದ್ದರು. ಡಾ.ರವೀಂದ್ರನಾಥ್ ತಪ್ಪು ವೆಸಗಿಲ್ಲ ಎಂದು ಕೆಎಟಿ ಆದೇಶ ನೀಡಿತ್ತು. ಆ ಬಳಿಕ ಡಾ. ರವೀಂದ್ರನಾಥ್ ಅವರನ್ನು ಸೇಡಂ ತಾಲೂಕು ಆಸ್ಪತ್ರೆಗೆ ಹಿರಿಯ ವೈದ್ಯಾಧಿಕಾರಿಯಾಗಿ ವರ್ಗಾವಣೆ ಮಾಡಲಾಗಿತ್ತು.
ಜಿಲ್ಲಾ ಮಟ್ಟದ ಅಧಿಕಾರಿಯಾಗಿದ್ದ ತಮ್ಮನ್ನು ತಾಲ್ಲೂಕು ಅಧಿಕಾರಿಯಾಗಿ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಮತ್ತೆ ಕೆಎಟಿ ಮೊರೆ ಹೋಗಿದ್ದರು. ಕೆಎಟಿ ಜಿಲ್ಲಾ ಮಟ್ಟದ ಅಧಿಕಾರಿ ಹುದ್ದೆ ನೀಡುವಂತೆ ಡಾ. ರವೀಂದ್ರನಾಥ್ ಪರ ಆದೇಶ ನೀಡಿತ್ತು. ಆದರೂ ಈವರೆಗೆ ಆದೇಶ ಪಾಲನೆ ಆಗದೆ, ಹಣ ನೀಡಿದರೆ ಮಾತ್ರವೇ ಹುದ್ದೆ ನೀಡಲಾಗುತ್ತದೆ ಎಂದು ಕೆಲ ಅಧಿಕಾರಿಗಳು ನೇರವಾಗಿ ಹೇಳಿದ್ದಾರೆ ಎಂದು ರವೀಂದ್ರನಾಥ್ ಆರೋಪಿಸಿದ್ದರು.