ಬೆಂಗಳೂರು, ಸೆ. 10 (DaijiworldNews/MB) : ಸ್ಯಾಂಡಲ್ವುಡ್ ಡ್ರಗ್ಸ್ ಜಾಲಕ್ಕೆ ಸಂಬಂಧಿಸಿ ಆರೋಪಿಗಳ ರಕ್ತ ಪರೀಕ್ಷೆಗೆ ನ್ಯಾಯಾಲಯ ಅನುಮತಿ ನೀಡಿದ್ದು ಬುಧವಾರ ಸಿಸಿಬಿ ಪೊಲೀಸರು ಇಬ್ಬರು ಆರೋಪಿಗಳನ್ನು ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆಗೆ ಒಳಪಡಿಸಿದ್ದಾರೆ.
ಇನ್ನು ಆರೋಪಿತ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಅವರನ್ನು ಬುಧವಾರವೂ ಕೂಡಾ ಸಿಸಿಬಿ ಪೊಲೀಸರು ನಗರದ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಮಹಿಳಾ ಇನ್ಸ್ಪೆಕ್ಟರ್ ಸಮ್ಮುಖದಲ್ಲಿ ವಿಚಾರಣೆ ನಡೆಸಿದ್ದು ಇವರಿಬ್ಬರ ರಕ್ತ ಪರೀಕ್ಷೆ ಗುರುವಾರ ನಡೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಇನ್ನು ಈ ನಟಿಯರಿವಬ್ಬರ ಮನೆ ಕೆಲಸದವರನ್ನು ಕೂಡಾ ಬುಧವಾರ ಸಿಸಿಬಿ ಪೊಲೀಸರು ವಿಚಾರಣಗೆ ಒಳಪಡಿಸಿದ್ದಾರೆ ಎಂದು ವರದಿ ತಿಳಿಸಿದೆ. ಹಾಗೆಯೇ ನಟಿಯರಿಬ್ಬರ ವಿಚಾರಣೆ ಬಗ್ಗೆ ಮಾಹಿತಿ ನೀಡಿರುವ ಅಧಿಕಾರಿಗಳು ತಮಗೂ ಡ್ರಗ್ಸ್ ಜಾಲಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳುತ್ತಿದ್ದಾರೆ ಎಂದಿದ್ದಾರೆ. ಹಾಗೆಯೇ ಇನ್ನುಳಿದ ಆರೋಪಿಗಳು ಡ್ರಗ್ಸ್ ವ್ಯಸನಿಗಳು ಎಂದು ಸಾಕ್ಷಿ ದೊರೆತಿದ್ದು ನ್ಯಾಯಾಲಯದ ಅನುಮತಿ ಪಡೆದು ಅವರನ್ನು ರಕ್ತ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಹೇಳಿದ್ದಾರೆ.