ಬೆಂಗಳೂರು, ಸೆ. 10 (DaijiworldNews/MB) : ಮುಂದಿನ ವರ್ಷ ಜೂನ್ ಒಳಗೆ ಗುಡಿಸಲಿನಲ್ಲಿರುವವರಿಗೆ ಮನೆ ನಿರ್ಮಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ವಸತಿ ಸಚಿವ ಸೋಮಣ್ಣ ಅವರು ಹೇಳಿದ್ದಾರೆ.
ಮನೆ ನಿರ್ಮಿಸಲಿರುವ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಸರ್ಕಾರಿ ಭೂಮಿ ಮಂಜೂರಾತಿ ಹಾಗೂ ಹಸ್ತಾಂತರ ಕುರಿತು ಬುಧವಾರ ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿ, ''ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿನ ಬಡವರಿಗೆ ಮನೆ ಒದಗಿಸುವ ಒಂದು ಲಕ್ಷ ಮನೆ ನಿರ್ಮಾಣ ಯೋಜನೆಯಡಿ 43 ಸಾವಿರ ಮನೆ ನಿರ್ಮಾಣ ನಡೆಯುತ್ತಿದೆ. ಜೂನ್ ಒಳಗಾಗಿ 25 ಸಾವಿರ ಮನೆ ವಿತರಿಸಲಾಗುತ್ತದೆ. ಬಡವರು, ಗುಡಿಸಲಿನಲ್ಲಿ ಇರುವವರಿಗೆ ಮನೆ ನೀಡಲಾಗುತ್ತದೆ. ಜೂನ್ ಒಳಗಾಗಿ 25 ಸಾವಿರ ಮನೆಗಳನ್ನು ನಿರ್ಮಿಸದಿದ್ದರೆ ಸಚಿವ ಸ್ಥಾನದಲ್ಲಿಯೇ ಇರುವುದಿಲ್ಲ'' ಎಂದು ಹೇಳಿದ ಅವರು, ''ಅಧಿಕಾರಿಗಳು ಈ ಕೆಲಸವನ್ನು ಸರಿಯಾಗಿ ನಿರ್ವಹಿಸದಿದ್ದರೂ ಅದರ ಹೊಣೆಯನ್ನು ನಾನೇ ಹೊರುತ್ತೇನೆ. ಮುಂದಿನ ವರ್ಷ ಜೂನ್ ಒಳಗೆ ಗುಡಿಸಲಿನಲ್ಲಿರುವವರಿಗೆ ಮನೆ ನಿರ್ಮಿಸದಿದ್ದರೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ'' ಎಂದು ಹೇಳಿದರು.